ಕರ್ನಾಟಕ

karnataka

ETV Bharat / state

ಎರಡೇ ತಿಂಗಳಲ್ಲೇ ಡಾಂಬರು ರಸ್ತೆ ಹಾಳು.. ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ - ಚಿಕ್ಕಮಗಳೂರು ತಾಲೂಕಿನ ತಿರುಗುಣ ಗ್ರಾಮ

ಚಿಕ್ಕಮಗಳೂರು ತಾಲೂಕಿನ ತಿರುಗುಣ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಮಾಡಿದ ಎರಡೇ ತಿಂಗಳಲ್ಲಿ ಡಾಂಬರು ರಸ್ತೆ ಹಾಳಾಗಿದೆ.

ಡಾಂಬರು ರಸ್ತೆ ಹಾಳಾಗಿರುವುದು
ಡಾಂಬರು ರಸ್ತೆ ಹಾಳಾಗಿರುವುದು

By

Published : Aug 8, 2022, 5:27 PM IST

ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕೆಂಬ ಕೂಗು ಜನರದ್ದು. ಆದರೆ, ಈ ಉದ್ದೇಶಕ್ಕೆ ಅಧಿಕಾರಿಗಳು, ಜನ ಪ್ರತಿನಿಧಿಗಳು, ಗುತ್ತಿಗೆದಾರರು ಎಳ್ಳುನೀರು ಬಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಎರಡೇ ತಿಂಗಳಲ್ಲಿ ನಡೆಸಿದ ರಸ್ತೆ ಕಾಮಗಾರಿಯ ನಿಜಬಣ್ಣ ಹೊರಬಂದಿದೆ.

ಬಯಲಾಯ್ತು ರಸ್ತೆಯ ನಿಜಬಣ್ಣ: ಚಿಕ್ಕಮಗಳೂರು ತಾಲೂಕಿನ ತಿರುಗುಣ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಮಾಡಿದ ಎರಡೇ ತಿಂಗಳಲ್ಲಿ ಡಾಂಬರು ರಸ್ತೆ ಹಾಳಾಗಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿದ್ದ ರಸ್ತೆ ಕಳಪೆ ಕಾಮಗಾರಿಯಿಂದ ಎರಡೇ ತಿಂಗಳಲ್ಲಿ ಗುಂಡಿ ಬಿದ್ದಿದೆ. ತುಂತುರು ಮಳೆಯಿಂದ ರಸ್ತೆಗೆ ಹಾಕಿದ್ದ ಟಾರ್ ಹೆಂಚಿನ ಮೇಲೆ ಹಾಕಿದ ರೊಟ್ಟಿಯಂತೆ ಕಿತ್ತು ಬರುತ್ತಿದೆ. ಇದನ್ನು ಕಂಡ ಗ್ರಾಮಸ್ಥರು, ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕೆಂಡಮಂಡಲವಾಗಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಗ್ರಾಮಸ್ಥರು ತಮ್ಮ ಜಮೀನುಗಳನ್ನು ಬಿಟ್ಟು ಕೊಟ್ಟಿದ್ದರು. ಆದರೆ, ಎರಡೇ ತಿಂಗಳಿನಲ್ಲಿ ರಸ್ತೆ ಕಾಮಗಾರಿಯ ನಿಜಬಣ್ಣ ಬಟಾಬಯಲಾಗಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಡಾಂಬರ್ ರಸ್ತೆ ಹಾಳಾಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಗುತ್ತಿಗೆದಾರ ಎಸ್ಕೇಪ್​: ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಿರ್ಮಿಸಿದ್ದ ರಸ್ತೆ ಕಿತ್ತು ಬರುತ್ತಿದೆ. ಯಾವ ರೀತಿ ಕಾಮಗಾರಿ ಮಾಡಿದ್ದಾರೋ ಗೊತ್ತಿಲ್ಲ. ಈ ರಸ್ತೆ ಮಾಡುವ ಬದಲು ಹಾಗೇ ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಳಪೆ ಕಾಮಗಾರಿ ಮಾಡಿ ಗುತ್ತಿಗೆದಾರ ಎಸ್ಕೇಪ್​ ಆಗಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಸ್ತೆ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಅಸಮಾಧಾನ:ಹೊಸ ಡಾಂಬರು ರಸ್ತೆ ಕೆಳಗೆ ಇರುವ ಹಳೇ ಡಾಂಬರು ಕೂಡ ಹಾಗೆ ಕಿತ್ತು ಬರುತ್ತಿದೆ. ಇದನ್ನ ಕಂಡ ಸ್ಥಳೀಯರು ಅಭಿವೃದ್ಧಿಗಾಗಿ ರಸ್ತೆ ಅಲ್ಲ. ದುಡ್ಡಿಗಾಗಿ ರಸ್ತೆ ನಿರ್ಮಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ರಸ್ತೆಗಳು ಹಾಳಾದರೆ, ಅವರು ಸಮಸ್ಯೆಗಳನ್ನು ಹೇಳಿಕೊಳ್ಳಲು ನಗರಕ್ಕೆ ಬರಬೇಕಾಗುತ್ತದೆ. ಆದ್ದರಿಂದ, ರಸ್ತೆ ಕಾಮಗಾರಿಗಳ ಬಗ್ಗೆ ಪ್ರಶ್ನೆ ಮಾಡುವವರು ಕಡಿಮೆ. ಹೀಗಾಗಿ, ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ಹಳ್ಳಿಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಓದಿ:ಸಿದ್ದರಾಮೋತ್ಸವಕ್ಕೆ ಬಿಜೆಪಿ ಕೇಂದ್ರ ನಾಯಕರು ತಕ್ಕ ಉತ್ತರ ನೀಡಲಿದ್ದಾರೆ: ಯತ್ನಾಳ್​

ABOUT THE AUTHOR

...view details