ಚಿಕ್ಕಮಗಳೂರು: "ಪೊಲೀಸರ ಸ್ಥೈರ್ಯ ಮತ್ತು ಶಕ್ತಿಯನ್ನು ಕುಂದಿಸುವ ಕೆಲಸವನ್ನು ವಕೀಲರು ಮಾಡುತ್ತಿದ್ದಾರೆ" ಎಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ನಿವೃತ್ತ ಹೆಡ್ ಕಾನ್ಸ್ಟೇಬಲ್ ಅಣ್ಣಯ್ಯ ಆರೋಪಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಪೊಲೀಸರು ಮತ್ತು ವಕೀಲರ ಸಂಘರ್ಷದ ಕುರಿತು ಮಾತನಾಡಿದ ಅವರು, "ಹೆಲ್ಮೆಟ್ ಹಾಕದೆ ಇವರುವವರನ್ನು ಪೊಲೀಸರು ಹಿಡಿಯುವುದು ಕಾನೂನು ಪ್ರಕಾರ ಸರಿ ಇದೆ" ಎಂದರು.
"ವಕೀಲ ಪ್ರೀತಮ್ ಎಂಬುವವರನ್ನು ಫೈನ್ ಕಟ್ಟಿಸಿಕೊಳ್ಳಲು ಠಾಣೆಗೆ ಕರೆದುಕೊಂಡು ಹೋದಾಗ ಕಪಾಳಮೋಕ್ಷ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ವಕೀಲರು ಅರಿಯಬೇಕಾಗುತ್ತದೆ. ಪೊಲೀಸರಿಗೆ ಸ್ವಾಭಿಮಾನ, ರೋಷಾವೇಶ ಇದೆ. ಪೊಲೀಸರು ತಪ್ಪಾಗಿದೆ ಎಂದು ಒಪ್ಪಿಕೊಂಡು, ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದರೂ, ವಕೀಲರು ಠಾಣೆಗೆ ಬಂದು ಧರಣಿ ಮಾಡಿ ಪೊಲೀಸರಿಗೆ ಬಟ್ಟೆ ಬಿಚ್ಚು ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ" ಎಂದು ಪ್ರಶ್ನಿಸಿದರು.
ಈ ರೀತಿಯ ವರ್ತನೆ ಯಾರೂ ಒಪ್ಪಲ್ಲ: "ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಎಫ್ಐಆರ್ ಅನ್ನು ಹರಿದು ಮುಖಕ್ಕೆ ಎಸೆದು ಗೂಂಡಾಗಿರಿ ವರ್ತನೆ ಮಾಡಿರುವುದನ್ನು ಸಾರ್ವಜನಿಕರು ಒಪ್ಪುತ್ತಾರಾ?. ಈ ಕಾರಣದಿಂದ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವುದಕ್ಕೆ, ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳುವುದಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೇನೆ. ವಕೀಲರು ಕಾನೂನು ಹೋರಾಟ ಮಾಡಬೇಕು. ಅದನ್ನು ಈ ರೀತಿ ವರ್ತಿಸುವುದನ್ನು ಯಾರೂ ಒಪ್ಪಲ್ಲ. ವಕೀಲರ ವರ್ತನೆ ಇದೇ ರೀತಿ ಮುಂದುವರೆದರೆ ನಾನು ರಾಜ್ಯಾದ್ಯಂತ ಇರುವ ಪೊಲೀಸರ ಕುಟುಂಬಗಳನ್ನು ಚಿಕ್ಕಮಗಳೂರು ಎಸ್ಪಿ ಕಚೇರಿ ಮುಂದೆ ತಂದು ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇನೆ" ಎಂದರು.