ಚಿಕ್ಕಮಗಳೂರು:ಸಾಮಾನ್ಯವಾಗಿ ಸಾಗುವಾನಿ ಮರಗಳು ಒಬ್ಬ ವ್ಯಕ್ತಿ ತಬ್ಬಿಕೊಳ್ಳುವಷ್ಟು ದಪ್ಪಕ್ಕೆ ಬೆಳೆಯುತ್ತವೆ. ಆದರೆ, ಭದ್ರಾ ಅಭಯಾರಣ್ಯದಲ್ಲಿ ಐದು ಜನ ತಬ್ಬಿಕೊಳ್ಳುವಷ್ಟು ದಪ್ಪದ ಸಾಗುವಾನಿ ಮರವೊಂದಿದೆ. ಈ ಮರ ಪ್ರಕೃತಿ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದ್ದು, ಪರಿಸರ ಪ್ರೇಮಿಗಳು, ಅಧ್ಯಯನಕಾರರ ಆಕರ್ಷಣೀಯ ಕೇಂದ್ರವೂ ಆಗಿದೆ.
ಭದ್ರಾ ಅರಣ್ಯದಲ್ಲಿರುವ ಈ ಸಾಗುವಾನಿ ಮರದ ಎತ್ತರ ಸರಿ ಸುಮಾರು 100 ಅಡಿಗೂ ಹೆಚ್ಚಿದೆ. ಮರದ ಸುತ್ತಳತೆ 5.45 ಮೀಟರ್, ಒಟ್ಟಿಗೆ ಐದು ಜನರು ತಮ್ಮ ಕೈಹಿಡಿದು ತಬ್ಬುವಷ್ಟು ದಪ್ಪವಿದೆ. ತಜ್ಞರ ಮಾಹಿತಿ ಪ್ರಕಾರ ಈ ಮರದ ಆಯಸ್ಸು ಬರೋಬ್ಬರಿ 300 ವರ್ಷಕ್ಕಿಂತಲೂ ಅಧಿಕ. ದೇಶದ ದಟ್ಟಾರಣ್ಯದಲ್ಲಿ ವಿವಿಧ ಜಾತಿಯ ವಿಶಿಷ್ಟ ಮರಗಳನ್ನು ಕಾಣಬಹುದು. ಆದರೆ, ಇಷ್ಟೊಂದು ದಪ್ಪದ ಸಾಗುವಾನಿ ಮರ ಕಾಣಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಈ ಸಾಗುವಾನಿ ಮರ, ಭದ್ರಾ ಅಭಯಾರಣ್ಯದ ವಿಶಿಷ್ಟತೆಗಳಲ್ಲಿ ಒಂದಾಗಿದೆ.