ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ 37 ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಹೆಣ್ಣುಮಕ್ಕಳ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತಿದ್ದ ಮೋಹಿನಿ ಸಿದ್ದೇಗೌಡ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಚಿಕ್ಕಮಗಳೂರಿನ ಮೋಹಿನಿ ಸಿದ್ದೇಗೌಡಗೆ ರಾಜ್ಯೋತ್ಸವ ಪ್ರಶಸ್ತಿ ಮೋಹಿನಿ ಸಿದ್ದೇಗೌಡ ಅವರು ಕಳೆದ 37 ವರ್ಷಗಳಿಂದ ಕಸ್ತೂರಿ ಬಾ ಸದನ ಹಾಗೂ ಕೌಟುಂಬಿಕ ಸಲಹಾ ಕೇಂದ್ರ ನಡೆಸಿಕೊಂಡು ಬರುತ್ತಿದ್ದಾರೆ. ಈ ಕೇಂದ್ರದ ಮೂಲಕ ವರದಕ್ಷಿಣೆ ಪ್ರಕರಣ, ಮಹಿಳಾ ದೌರ್ಜನ್ಯ, ದಾಂಪತ್ಯದಲ್ಲಿ ವಿರಸ, ಬಹುಪತ್ನಿತ್ವ, ಮದ್ಯಪಾನ ವ್ಯಸನಿಗಳ ಕುಟುಂಬ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಮೋಹಿನಿ ಸಿದ್ದೇಗೌಡ, ನಾನು 37 ವರ್ಷಗಳಿಂದ ಸಾರ್ವಜನಿಕ ಜೀವನ ನಡೆಸುತ್ತಿದ್ದೇನೆ. ಪ್ರಮುಖವಾಗಿ ಸಾರಾಯಿ ವಿರುದ್ಧ ಹೋರಾಟ ಮಾಡಿದ್ದೇನೆ. ನನ್ನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳು ದಾಖಲಾಗಿದ್ದು, ನನ್ನ ಜೀವನದ ಅರ್ಧ ಭಾಗವನ್ನು ಕೋರ್ಟ್ನಲ್ಲಿಯೇ ಕಳೆದಿದ್ದೇನೆ.
ಜಿಲ್ಲೆಯ ಹಳ್ಳಿ-ಹಳ್ಳಿಗಳನ್ನು ಸುತ್ತಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಸಾಕಷ್ಟು ಮಹಿಳೆಯರ ಶೋಷಣೆ ಪ್ರಕರಣ ನೋಡಿದ್ದು, ಗರಿಷ್ಠ ಮಟ್ಟದಲ್ಲಿ ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ. ಹೆಣ್ಣು ಮಕ್ಕಳಿಗೆ ಯಾವುದೇ ಸಮಸ್ಯೆ ಇದ್ದರೂ ಅವರು ನನ್ನ ಬಳಿ ಬರುತ್ತಾರೆ ಅಥವಾ ನಾನೇ ಅವರ ಬಳಿ ಹೋಗಿ ಸಮಸ್ಯೆ ಬಗೆಹರಿಸುತ್ತೇನೆ. ನಾನು ಪ್ರಶಸ್ತಿಗಾಗಿ ಯಾವುದೇ ಅರ್ಜಿ ಹಾಕಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಸಾಕಷ್ಟು ಸಂಘ ಸಂಸ್ಥೆಗಳಿಗೆ ಸದಸ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ಪ್ರಶಸ್ತಿ ಬಂದಿರೋದು ತುಂಬಾ ಖುಷಿ ಆಗುತ್ತಿದೆ ಎಂದರು.