ಕರ್ನಾಟಕ

karnataka

ETV Bharat / state

ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ, ರಸ್ತೆಗುರುಳಿದ ಮರಗಳು; ಗಂಟೆಗಟ್ಟಲೆ ಟ್ರಾಫಿಕ್ ಜಾಮ್ - Hemavati River

ಚಾರ್ಮಾಡಿ ಘಾಟ್​ ರಸ್ತೆಗೆ ಮರ ಬಿದ್ದು, ಮೂರು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತವಾಯಿತು.

ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು
ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು

By ETV Bharat Karnataka Team

Published : Oct 1, 2023, 5:01 PM IST

ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ

ಚಿಕ್ಕಮಗಳೂರು : ಜಿಲ್ಲೆಯ ಚಾರ್ಮಾಡಿ ಘಾಟ್​ನಲ್ಲಿ ಬೃಹತ್ ಗಾತ್ರದ ಮರ ರಸ್ತೆಗೆ ಬಿದ್ದು ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆಯಿತು. ಕಾಫಿನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ವಿಪರೀತ ಗಾಳಿ, ಮಂಜು ಮುಸುಕಿದ ವಾತಾವರಣ ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿದೆ.

ನಿರಂತರ ಮಳೆಗೆ ಈ ರಸ್ತೆಯ ತಡೆಗೋಡೆ ಕುಸಿದಿದೆ. ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಮಳೆ ಜೋರಾಗಿದೆ. ಮೂರು ದಿನದಲ್ಲಿ 164.2 ಮಿ.ಮೀ ಮಳೆ ದಾಖಲಾಗಿದೆ. ಧಾರಾಕಾರ ಮಳೆಯಿಂದ ರೈತರ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ.

ಕಾಫಿ ಬೆಳೆ ಉದುರುವಿಕೆ ಆರಂಭವಾಗಿದೆ. ಕಾವೇರಿ ಹೋರಾಟದ ಬೆನ್ನಲ್ಲೇ ಮಲೆನಾಡಿನಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಚಾರ್ಮಾಡಿ ಘಾಟಿಯಲ್ಲಿರುವ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಕೆಲವೇ ಅಂತರದಲ್ಲಿ ತಡೆಗೋಡೆ ಕುಸಿದಿದೆ. ಮಳೆ ಹೆಚ್ಚಾದರೆ ಮಣ್ಣು ಕುಸಿಯುವ ಅಪಾಯವೂ ಇದೆ.

ಇಲ್ಲಿ ರಸ್ತೆಗೆ ಪಾಯ ಹಾಕಲು ಪ್ರಪಾತ ಇರುವುದರಿಂದ ತೊಂದರೆಯಾಗಿದೆ. ಬಲ ಭಾಗದಲ್ಲಿ ಮುಗಿಲೆತ್ತರದ ಬಂಡೆ ಆಕಾಶಕ್ಕೆ ಮುಖ ಮಾಡಿರುವುದರಿಂದ ಕಲ್ಲು ಬಂಡೆ ಒಡೆಯುವುದು ಕಷ್ಟವಾಗಿದೆ. ಸೋಮನಕಾಡು ಕಣಿವೆ ಪ್ರಪಾತದ ಬಳಿ ಇತ್ತೀಚೆಗೆ ನೀರು ಸಾಗಿಸುತ್ತಿದ್ದ ಲಾರಿ ಬಿದ್ದ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಅವು ಗಾಳಿಗೆ ಬಿದ್ದು ಹೋಗಿವೆ.

ಮಳೆಯ ನಡುವೆಯೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಳೆಯ ಅಬ್ಬರಕ್ಕೆ ಪ್ರವಾಸಿಗರು ಘಾಟಿಯ ಜಲಪಾತಗಳಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಇಲ್ಲಿನ ಜಲಪಾತಗಳಂತೂ ಭೋರ್ಗರೆದು ಧುಮ್ಮಿಕ್ಕುತ್ತಿದ್ದು ಕಣ್ಮನ ಸೆಳೆಯುತ್ತಿವೆ. ಘಾಟಿಯಲ್ಲಿ ಒಂದು ಮರ ಎರಡು ದಿನದ ಹಿಂದೆ ಬಿದ್ದಿದ್ದು, ಯಂತ್ರದಿಂದ ಕುಯ್ದು ತೆರವುಗೊಳಿಸಲಾಗಿತ್ತು.

ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ರಸ್ತೆಗೆ 3 ಮರಗಳು ಒಮ್ಮೆಲೆ ಬಿದ್ದಿದ್ದು, ಸಮಾಜ ಸೇವಕ ಹಸನಬ್ಬ ಚಾರ್ಮಾಡಿ ಹಾಗೂ ಮೊಹಮ್ಮದ್ ಆರೀಫ್ ತಂಡ ಹಾಗೂ ಅಲ್ಲಿಯ ಸ್ಥಳೀಯರು ಸೇರಿ ಯಂತ್ರದಿಂದ ಮರವನ್ನು ತೆರವುಗೊಳಿಸಿದ್ದಾರೆ. ಮರ ಬಿದ್ದುದರಿಂದ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎರಡು ಕಡೆಯ ತಡೆಗೋಡೆಗಳಿಗೆ ಎಚ್ಚರಿಕೆಯ ಫಲಕ ಹಾಕಿ ಅಪಾಯದ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೇಮಾವತಿ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಬಾಳೂರು ಹೋಬಳಿಯ ಮೇಗೂರು ರಾಮಯ್ಯ ಎಂಬವರ ಮನೆ ಕುಸಿದಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಅತಿಯಾದ ಮಳೆಯಿಂದ ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಡುತ್ತಿದೆ.

ಇದನ್ನೂ ಓದಿ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ: ತುಂಗಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರ ರಕ್ಷಣೆ

ABOUT THE AUTHOR

...view details