ಚಿಕ್ಕಮಗಳೂರು :ಪುನೀತ್ ರಾಜ್‌ಕುಮಾರ್ ಅವರು ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಹೋಬಳಿಯ ಭಾಗೇಮನೆಯ ಅಳಿಯ. ಕಾಫಿನಾಡಿನ ಅಳಿಯನನ್ನು ಕಳೆದುಕೊಂಡ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕಾಫಿನಾಡಿನಲ್ಲಿ ದುಃಖ ಮಡುಗಟ್ಟಿದೆ. ಕಾಫಿನಾಡಿನೊಂದಿಗೆ ಅಪಾರವಾದ ನಂಟು ಹೊಂದಿದ್ದು, ಅವರ ಅನೇಕ ಚಲನಚಿತ್ರಗಳಿಗೆ ಈ ನೆಲ ಸಾಕ್ಷಿಯಾಗಿದೆ.
ಅಭಿ, ಅಪ್ಪು, ಮಿಲನ, ಬೆಟ್ಟದ ಹೂವು ಸೇರಿದಂತೆ 15ಕ್ಕೂ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿವೆ. ಚಿತ್ರೀಕರಣದ ಜೊತೆಗೆ ಕೌಟುಂಬಿಕ ನಂಟು ಹೊಂದುವ ಮೂಲಕ ಕಾಫಿನಾಡಿನ ಅಳಿಯ ಎಂಬ ಗರಿಮೆ ಹೆಚ್ಚಿಸಿತ್ತು.
ಮಲ್ಲಂದೂರು ಸಮೀಪದ ಬಾಗೇಮನೆ ರೇವನಾಥ್ ಮತ್ತು ವಿಜಯಾ ದಂಪತಿ ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರ ಪುತ್ರಿ ಅಶ್ವಿನಿ ಅಲ್ಲೇ ಹುಟ್ಟಿ ಬೆಳೆದಿದ್ದು, ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ಪ್ರೀತಿಸಿ ಕುಟುಂಬದ ಒಪ್ಪಿಗೆಯೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು.
40 ವರ್ಷಗಳಿಂದ ಬಿ.ರೇವನಾಥ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಬಾಗೇಮನೆಯಲ್ಲಿ ಬಿ.ರೇವನಾಥ್ ಅವರಿಗೆ ಸೇರಿದ ಮನೆ ಇದೆ. ಅಲ್ಲಿಗೆ ಅನೇಕ ಬಾರಿ ಪುನೀತ್ ರಾಜ್‌ಕುಮಾರ್ ಬಂದು ಹೋಗುತ್ತಿದ್ದರು.
ಅವರ ನಿಧನದಿಂದ ಬಾಗೇಮನೆ ಮತ್ತು ಜಿಲ್ಲಾದ್ಯಂತ ಅತೀವ ಶೋಕ ಮಡುಗಟ್ಟಿದೆ. ಚಿಕ್ಕಮಗಳೂರಿನ ಸೌಂದರ್ಯ ನೋಡಲು ಅನೇಕ ಸಲ ಜಿಲ್ಲೆಗೆ ಬರುತ್ತಿದ್ದರು. ಮುಳ್ಳಯ್ಯನಗಿರಿ ಸೇರಿ ಮೂಡಿಗೆರೆ, ಕೊಟ್ಟಿಗೆ ಹಾರ ಹೀಗೆ ಅನೇಕ ಕಡೆ ಬಹಳಷ್ಟು ಬಾರಿ ಬಂದಿದ್ದರು. ಚಿಕ್ಕಮಗಳೂರಿಗೆ ಬಂದಾಗಲೆಲ್ಲ ಹೆಚ್ಚಾಗಿ ಸರಾಯ್ ಹೋಟೆಲ್, ತ್ರಿವಿಕ್, ಕ್ರೀಮ್ ರೋಸ್ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು.
ಮಲೆನಾಡಿನ ಅಕ್ಕಿರೊಟ್ಟಿ ಮೀನ ಸಾರು, ಮಟನ್ ಚಾಪ್ಸ್ ಸವಿಯುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರ ಅಭಿನಯದ ರಾಜಕುಮಾರ ಚಿತ್ರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ 2017 ಮೇ 13ರಂದು ಚಿಕ್ಕಮಗಳೂರು ನಗರದ ಮಿಲನ ಚಿತ್ರ ಮಂದಿರಕ್ಕೆ ಆಗಮಿಸಿ ಚಿತ್ರದ ಪ್ರಮೋಷನ್ ಮಾಡಿದ್ದರು. ಈ ಸಂದರ್ಭದಲ್ಲಿ ಚಿತ್ರ ಮಂದಿರದ ಬಾಲ್ಕನಿಯಲ್ಲಿ ನಿಂತು ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು' ಹಾಡು ಹೇಳಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದ್ದರು.