ಕರ್ನಾಟಕ

karnataka

ETV Bharat / state

30 ವರ್ಷಗಳ ಬಳಿಕ ಕೈ ಕೊಟ್ಟ ವರುಣ... ಮಳೆಗಾಗಿ ಕಾಫಿನಾಡಲ್ಲಿ ಗಡಿ ಮಾರಿಗೆ ವಿಶೇಷ ಪೂಜೆ

ಈ ಬಾರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಬಾರದೇ ಇದ್ದು ಕಂಗೆಟ್ಟ ಜನ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.

ಗಡಿ ಮಾರಿಗೆ ವಿಶೇಷ ಪೂಜೆ
ಗಡಿ ಮಾರಿಗೆ ವಿಶೇಷ ಪೂಜೆ

By

Published : Jun 30, 2023, 7:53 AM IST

Updated : Jun 30, 2023, 9:26 AM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಗಿ ಪೂಜೆ

ಚಿಕ್ಕಮಗಳೂರು: 30 ವರ್ಷಗಳ ಬಳಿಕ‌ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಕೈ ಕೊಟ್ಟಿದೆ. ಪ್ರತಿ ವರ್ಷ ಸುರಿಯುತ್ತಿದ್ದ ವಾಡಿಕೆ ಮಳೆಯೂ ಆಗದೆ ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲಿ ‌ಬರದ ವಾತಾವರಣ ಸೃಷ್ಟಿಯಾಗುವ ಆತಂಕ ಮೂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೇಲೆ ಮುನಿಸಿಕೊಂಡಿರುವ ವರುಣ ದೇವನಿಗಾಗಿ ಜನತೆ ದೇವರ ಮೊರೆ ಹೋಗುತ್ತಿದ್ದಾರೆ.

ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುನಿಸಿಕೊಂಡಿರುವ ವರುಣನಿಗಾಗಿ ಮಲೆನಾಡಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, 3 ದಶಕದ ಬಳಿಕ‌ ಕಾಫಿನಾಡಿನಲ್ಲಿ ಬರದ ಆತಂಕ ಮನೆ ಮಾಡಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿ ಸುರಿಯುತ್ತಿತ್ತು. ವರುಣನ ರಣಚಂಡಿ ರೂಪಕ್ಕೆ ಮಲೆನಾಡು ಜನ ಮಳೆಗಾಲ ಮುಗಿದರೇ ಸಾಕು, ಅತಿವೃಷ್ಟಿಯಾಗದಂತೆ ದೇವರ ಮೊರೆ ಹೋಗುತ್ತಿದ್ದರು. ಆದರೆ ಈ ಬಾರಿ 30 ವರ್ಷಗಳ ಬಳಿಕ ಮಳೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೈ ಕೊಟ್ಟಿದ್ದು ವರುಣ ದೇವನ ಸಿಂಚನಕ್ಕಾಗಿ ದೇವರಿಗೆ ಪೂಜೆ ಮಾಡುವ ಸ್ಥಿತಿ ಬಂದಿದೆ.

ಪ್ರತಿನಿತ್ಯ ಮಳೆಗಾಗಿ ಶಕ್ತಿ‌ ದೇವತೆ ಹೊರನಾಡು, ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ, ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ ಚಂಡಿಕಾ ಯಾಗವನ್ನೂ ಮಳೆಗಾಗಿ ಮಾಡಲಾಗಿತ್ತು. ಆದರೆ ಮಳೆ ಮಾತ್ರ ಕಣ್ಣ ಮುಚ್ಚಾಲೆ ಆಟವಾಡಲು ಶುರು ಮಾಡಿದೆ. ಮಳೆಗಾಗಿ ಮಲೆನಾಡ ಭಾಗವಾದ ಎನ್ ಆರ್ ತಾಲೂಕಿನ ಮೆಣಸೂರು ಗ್ರಾಮದಲ್ಲಿ ವಿಶೇಷವಾದ ಗಡಿ ಮಾರಿಗೆ ಪೂಜೆ ಮಾಡಿ ಇನ್ನಾದರೂ ಮಳೆ ಸುರಿಸು, ರೈತರ ಸಂಕಷ್ಟಕ್ಕೆ ನೆರವಾಗು ಎಂದು ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದ್ದಾರೆ.

ಸಾಂಕ್ರಾಮಿಕ ರೋಗ ನಿವಾರಣೆಗೆ ಎರಡು ವರ್ಷಕ್ಕೊಮ್ಮೆ ಎನ್ ಆರ್ ಪುರ ತಾಲೂಕು ಸೇರಿದಂತೆ ನೂರಾರು ಮಲೆನಾಡು ಭಾಗದ ಗ್ರಾಮದಲ್ಲಿ ಗಡಿ ಮಾರಿ ಪೂಜೆ ಮಾಡಲಾಗುತ್ತದೆ. ಆದರೆ 10 ವರ್ಷಗಳ ಬಳಿಕ ಮಳೆಗಾಗಿ ಗಡಿ ಮಾರಿಗೆ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ. ಪೂಜೆ ಮಾಡಿದ ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಗಡಿ ಮಾರಿಯನನ್ನು ಕಳಿಸಲಾಗುತ್ತೆ. ಗಡಿ ಮಾರಿಯನ ಮತ್ತೊಂದು ಗ್ರಾಮದವರು ಬರ ಮಾಡಿಕೊಂಡು ಮಳೆಗಾಗಿ ಪೂಜೆ ಮಾಡಲಾಗುತ್ತೆ. ಗ್ರಾಮಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ನಡೆಯುತ್ತಿದ್ದ ಗಡಿ ಮಾರಿಗೆ ಪೂಜೆ ಈಗ ಹತ್ತು ವರ್ಷಗಳ ಬಳಿಕ ಮಳೆಗಾಗಿ ಈ ವರ್ಷ ಪೂಜೆ ಮಾಡಲಾಗಿದೆ.

ಒಟ್ಟಾರೆಯಾಗಿ, ಜೂನ್ ಕೊನೆಯ ವಾರಕ್ಕೆ ಬಂದರು ಮಳೆ ಮಾತ್ರ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಾಡಿಕೆ‌ಯಷ್ಟು ಸುರಿದಿಲ್ಲ‌. 30 ವರ್ಷಗಳ ನಂತರ ಚಿಕ್ಕಮಗಳೂರು ಜಿಲ್ಲೆಯ ಮೇಲೆ ಮುನಿಸಿಕೊಂಡಿರುವ ಮಳೆಗಾಗಿ ಮಲೆನಾಡಿಗರು ದೇವರ ಮೊರೆ ಹೋಗಿದ್ದಾರೆ. ಗಡಿ ಮಾರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವ ಎನ್ಆರ್ ಪುರದ ಜನತೆ ಅವರ ಪ್ರಾರ್ಥನೆ ಹಾಗೂ ಪೂಜೆಗೆ ಇನ್ನಾದರು ಮುನಿಸು ಬಿಟ್ಟು ವರುಣ ಕೃಪೆ ತೋರುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಹಾವೇರಿ: ಕೈಕೊಟ್ಟ ಮುಂಗಾರು ಮಳೆ; ಮಾರುಕಟ್ಟೆಯಲ್ಲಿ ಜಾನುವಾರುಗಳ ಕೊರತೆ

Last Updated : Jun 30, 2023, 9:26 AM IST

ABOUT THE AUTHOR

...view details