ಕಲಬುರಗಿ:545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರೋ ಅಕ್ರಮ ಪ್ರಕರಣದ ಜಾಡು ಹಿಡಿದು ಬೆನ್ನತ್ತಿರೋ ಸಿಐಡಿ ಅಧಿಕಾರಿಗಳಿಗೆ ಒಂದೊಂದೇ ಸ್ಫೋಟಕ ಮಾಹಿತಿಗಳು ಸಿಗುತ್ತಿವೆ. ಇಡೀ ಅಕ್ರಮದ ಪ್ರಮುಖ ಆರೋಪಿ ಎನ್ನಲಾದ ಮಂಜುನಾಥ್ ಮೇಳಕುಂದಿ, ಅಕ್ರಮ ಹೊರಗೆ ಬರುತ್ತಿದ್ದಂತೆ ತನ್ನಲ್ಲಿದ್ದ ಮೊಬೈಲ್ ಅನ್ನು ಡ್ಯಾಂಗೆ ಬಿಸಾಕಿದ್ದಾನೆ ಎಂಬ ಮಾಹಿತಿ ಹೊರಬಂದಿದ್ದು, ಇದೀಗ ಮೊಬೈಲ್‌ಗಾಗಿ ಡ್ಯಾಂನಲ್ಲಿ ಸಿಐಡಿ ಅಧಿಕಾರಿಗಳು ತಲಾಶ್ ನಡೆಸಿದ್ದಾರಂತೆ.
ಈಗಾಗಲೇ ಬಂಧಿಸಲ್ಪಟ್ಟಿರುವ ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮೇಳಕುಂದಿ, ಅಕ್ರಮ ಹೊರಬರುತ್ತಿದ್ದಂತೆ ಸಾಕ್ಷಿ ನಾಶಪಡಿಸಲು ಮೇ 1 ರಂದು ತನ್ನ ಮೊಬೈಲ್‌ನ್ನ ಆಳಂದ ತಾಲೂಕಿನ ಆಮರ್ಜಾ ಡ್ಯಾಂನಲ್ಲಿ ಬಿಸಾಕಿದ್ದಾರಂತೆ. ಸಿಐಡಿ ವಿಚಾರಣೆ ವೇಳೆ ಮೇಳಕುಂದಿ ಈ ವಿಷಯ ಬಾಯ್ಬಿಟ್ಟಿದ್ದು, ಆ ಸೀಕ್ರೆಟ್ ಮೊಬೈಲ್ ಹುಡುಕಲು ಅಧಿಕಾರಿಗಳು ಮುಂದಾಗಿದ್ದಾರೆ. ಇಬ್ಬರು ನುರಿತ ಈಜು ತಜ್ಞರನ್ನ ಸಿಐಡಿ ಅಧಿಕಾರಿಗಳು ಕರೆದುಕೊಂಡು ಹೋಗಿ 35 ಅಡಿ ಆಳದ ಡ್ಯಾಂನಲ್ಲಿ ಮೊಬೈಲ್ ಹುಡುಕುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಭಾವಿಗಳು ಭಾಗಿಯಾಗಿರುವ ಬಗ್ಗೆ ಮೊಬೈಲ್‌ನಲ್ಲಿ ಮಾಹಿತಿ ಇದೆಯಾ ಎಂಬ ಅನುಮಾನ ಹುಟ್ಟಿಕೊಂಡಿದ್ದು, ಒಂದು ವೇಳೆ ಮೊಬೈಲ್ ಡೇಟಾ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದ್ದೇ ಆದಲ್ಲಿ ಅಕ್ರಮದ ಮತ್ತಷ್ಟು ರೂವಾರಿಗಳು ಸಿಕ್ಕಿ ಬೀಳಲಿದ್ದಾರೆ. ಹಾಗೆಯೇ ಡೀಲ್ ನಡೆದ ಸ್ಥಳಾವಾದ ದಿವ್ಯಾ ಹಾಗರಗಿ ಮನೆಗೆ ಮೇಳಕುಂದಿಯನ್ನ ಕರೆತಂದು ಸಿಐಡಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದಾರೆ.
ಇದಕ್ಕೂ ಮುನ್ನ ಪಿಡಬ್ಲ್ಯೂಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಬೆಂಗಳೂರಲ್ಲಿ ಮಂಜುನಾಥ್ ಜೈಲು ಪಾಲಾಗಿದ್ದ. ಬಳಿಕ ಜೈಲಿನಿಂದ ಹೊರಬಂದಿದ್ದು, ಇದೀಗ ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಸಿಐಡಿ ಬಂಧನದಲ್ಲಿದ್ದಾರೆ. ಇನ್ನೂ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿರುವ ಮಂಜುನಾಥ್ ಮೇಳಕುಂದಿ, ಕಲಬುರಗಿ ನಗರದ ಜಯನಗರ ಬಡಾವಣೆಯಲ್ಲಿ ಕೋಟಿ ರೂಪಾಯಿ ವೆಚ್ಚದ ಭವ್ಯ ಬಂಗಲೆ ಕಟ್ಟಿಸುತ್ತಿದ್ದಾರಂತೆ. ಇನ್ನೂ ನಿರ್ಮಾಣ ಹಂತದಲ್ಲಿರೋ ಮನೆಯನ್ನ ಯಾರಾದರೂ ಖರೀದಿ ಮಾಡುವವರಿದ್ದರೆ ಮಾಡಿ ಅಂತಾ ಮೇಳಕುಂದಿ ಹೇಳುತ್ತಿದ್ದಾರಂತೆ. ಅಷ್ಟಕ್ಕೂ ಮನೆ ವಾಸ್ತು ದೋಷದಿಂದಾಗಿಯೇ ನನಗೆ ಇಷ್ಟೆಲ್ಲ ಕೆಟ್ಟದ್ದು ಆಗಿದೆ ಅಂತಾ ಸಿಐಡಿ ಅಧಿಕಾರಿಗಳ ಮುಂದೆ ಆರೋಪಿ ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇಡೀ ಅಕ್ರಮದ ಕೇಂದ್ರ ಸ್ಥಾನವಾಗಿರೋ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರ 11 ದಿನಗಳ ಸಿಐಡಿ ಕಸ್ಟಡಿ ನಿನ್ನೆಗೆ ಅಂತ್ಯವಾಗಿದೆ. ದಿವ್ಯಾಳನ್ನ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ದಿವ್ಯಾ ಹಾಗರಗಿ ಪಿಎಸ್‌ಐ ಪರೀಕ್ಷೆಯಲ್ಲಿ ಮಾಡಿರೋ ಅಕ್ರಮದ ತನಿಖೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ, ದಿವ್ಯಾಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಡೀ ಅಕ್ರಮದ ಕಿಂಗ್ಪಿನ್ ಎನ್ನಲಾಗುತ್ತಿರುವ ಮಂಜುನಾಥ್ ಮೇಳಕುಂದಿ ಡ್ಯಾಂನಲ್ಲಿ ಬಿಸಾಕಿರೋ ಮೊಬೈಲ್ ಸಿಕ್ಕ ನಂತರ ಅದರಲ್ಲಿನ ಡೇಟಾ ರಹಸ್ಯ ಸ್ಫೋಟಗೊಂಡರೇ ಇಡೀ ಪ್ರಕರಣಕ್ಕೆ ಮತ್ತಷ್ಟು ರೋಚಕ ತಿರುವು ಸಿಗುವ ಸಾಧ್ಯತೆಯಿದೆ.
(ಇದನ್ನೂ ಓದಿ:ರಾತ್ರಿ ಸಾವು, ಬೆಳಗ್ಗೆ ವ್ಯಕ್ತಿಗೆ ಮರುಜೀವ! ಶವ ಮೇಲಕ್ಕೆ ಎಸೆಯುವ ಭಕ್ತ ಸಮೂಹ)