ಚಿಕ್ಕಮಗಳೂರು:ಎಂಟು ದಿನಗಳಿಂದ ಆರ್ಥಿಕ ನಷ್ಟದಿಂದ ಬೀಗ ಹಾಕಿದ್ದ ಸಹಕಾರ ಸಾರಿಗೆ ಸಂಸ್ಥೆಯ ನೌಕರರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಆದರೆ ಸರ್ಕಾರದ ನೆರವು ಸಿಕ್ಕ ನಂತರವಷ್ಟೇ ಬಸ್‍ಗಳನ್ನು ರಸ್ತೆಗಿಳಿಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆಯಿಂದ ಹಿಂದೆ ಸರಿದ ಸಹಕಾರ ಸಾರಿಗೆ ನೌಕರರು ಕಾರ್ಮಿಕರೇ ಮಾಲೀಕರಾಗಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಬೀಗ ಹಾಕುವ ಸ್ಥಿತಿಗೆ ತಲುಪಿತ್ತು . 75 ಬಸ್‍ಗಳನ್ನ ಶೆಡ್‍ನಲ್ಲಿ ನಿಲ್ಲಿಸಿ, ಸರ್ಕಾರದ ನೆರವಿಗಾಗಿ ಪ್ರತಿಭಟನೆ ಮಾಡಲಾಗುತ್ತಿತ್ತು. ಕಳೆದ ಎಂಟು ದಿನಗಳಿಂದ ಕೊಪ್ಪ ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಎನ್.ಜೀವರಾಜ್ ಸ್ಥಳದಲ್ಲೇ ಸಹಕಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು, ಸರ್ಕಾರದಿಂದ ಸಹಕಾರದ ಭರವಸೆ ನೀಡಿದ ಮೇಲೆ ಕಾರ್ಮಿಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಆದರೆ ಸರ್ಕಾರದಿಂದ ಸಹಕಾರ ದೊರೆತ ಮೇಲೆ ಬಸ್‍ಗಳನ್ನು ರಸ್ತೆಗಿಳಿಸಲು ತೀರ್ಮಾನಿಸಿದ್ದಾರೆ.
ಜೀವರಾಜ್ ಮಾತು ಕೇಳಿ ಮಲೆನಾಡಿಗರು ನಿಟ್ಟುಸಿರು ಬಿಡುವಂತಾಗಿದ್ದು, ಕಳೆದೊಂದು ವಾರದಿಂದ ಬಸ್‍ಗಿಳಿಲ್ಲದೆ ಜನ ಹೈರಾಣಾಗಿದ್ದಾರೆ. ಕೂಡಲೇ ಸರ್ಕಾರ ನೆರವು ನೀಡಿ ಇಲ್ಲಿನ ಬಸ್ ಸಮಸ್ಯೆಯನ್ನು ಬಗೆಹರಿಸಿ ಕಾರ್ಮಿಕರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.