ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿಯಿರುವ ಜಾಗವೇ ಈಗ ವಿವಾದದ ಕೇಂದ್ರಬಿಂದು. ಆ ಜಾಗಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಎರಡು ಸಮುದಾಯದವರು ಕೋರ್ಟ್ ಗೆ ಅಲೆದಾಟ ನಡೆಸುತ್ತಿದ್ದಾರೆ. ಇದೀಗ ಆ ಜಾಗದ ಸರ್ವೇ ಕಾರ್ಯ ನಡೆಸುವಂತೆ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆ ಜಿಲ್ಲಾಡಳಿತ ಅಖಾಡಕ್ಕೆ ಇಳಿದು ಪೊಲೀಸ್ ಬಂದೋಬಸ್ತ್ನಡಿ ಸರ್ವೇ ಕಾರ್ಯ ಆರಂಭಿಸಿದೆ.
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಬಡಾಮಕಾನ್ ಭಾಗದ ಜಾಗ ನಲ್ಲೂರು ಮಠದ ಮನೆಯವರು ಹಾಗೂ ಜಾಮಿಯಾ ಮಸೀದಿಯ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ನಗರಸಭೆಗೆ ಸರ್ವೇ ಕಾರ್ಯ ನಡೆಸುವಂತೆ ನಲ್ಲೂರು ಮಠದ ಮನೆಯವರ ಆಡಳಿತ ಮಂಡಳಿಯ ನಂಜಪ್ಪ ಎನ್ನುವರು ಮನವಿ ಮಾಡಿದ್ದರು. ಜೊತೆಗೆ ಜಿಲ್ಲಾ ಕೋರ್ಟ್, ಜಾಗದ ಸರ್ವೇ ಕಾರ್ಯ ನಡೆಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ನಗರಸಭೆಯಿಂದ ಸರ್ವೇ ಕಾರ್ಯ ಆರಂಭವಾಗಿದೆ.