ಚಿಕ್ಕಮಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಅತೀ ಶೀಘ್ರದಲ್ಲೇ 50 ಬೆಡ್ ವುಳ್ಳ ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಗುವುದು ಎಂದು ಕೊಪ್ಪ ತಾಲೂಕು ವೈದ್ಯಾಧಿಕಾರಿ ಮಹೇಂದ್ರ ಕಿರಿಟಿ ಹೇಳಿದ್ದಾರೆ.
ಸದ್ಯ ಕೊಪ್ಪ ಸರ್ಕಾರಿ ಆಸ್ಪತ್ರೆ 100 ಹಾಸಿಗೆಯ ಸಾಮರ್ಥ್ಯ ಹೊಂದಿದ್ದು, ಅದರಲ್ಲಿ 50 ಹಾಸಿಗೆಯನ್ನು ಉಪಯೋಗಿಸಿಕೊಂಡು ಕೋವಿಡ್ ಆಸ್ವತ್ರೆ ನಿರ್ಮಾಣ ಮಾಡಲಾಗುವುದು. ಅದರಲ್ಲಿ 30 ಹಾಸಿಗೆಗಳಿಗೆ ಆಮ್ಲಜನಕ ಸರಬರಾಜು ಲೈನ್ ಅಳವಡಿಕೆ ನಿರ್ಮಾಣ ಮಾಡಲಿದ್ದು, ಈ ವೇಳೆ ಸಾರ್ವಜನಿಕರಿಗೆ ಆಸ್ಪತ್ರೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ವೈದ್ಯಾಧಿಕಾರಿ ಮಹೇಂದ್ರ ಕಿರಿಟಿ ಅವರು ತಿಳಿಸಿದರು.
ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಕ್ವಾರಂಟೈನ್
ಎಲ್ಲ ಸಮಯದಲ್ಲಿಯೂ ಸರಿಯಾಗಿ ಮಾಸ್ಕ್ ಹಾಕದೇ ಸಾರ್ವಜನಿಕವಾಗಿ ಓಡಾಡುತ್ತಿದ್ದ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಕೊನೆಗೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.
ಊರೆಲ್ಲಾ ಸುತ್ತಿದ ಬಳಿಕ ಜಿಲ್ಲಾಡಳಿತದ ಸೂಚನೆ ಮೇರೆಗೆ ಶಾಸಕರು ಕ್ವಾರಂಟೈನ್ ಆಗಿದ್ದು, ಇವರು ವಿಧಾನ ಪರಿಷತ್ ಸದಸ್ಯ ಎಂ. ಕೆ. ಪ್ರಾಣೇಶ್ ಅವರು ಜೊತೆ ಜೂನ್ 29 ರಂದು ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಪ್ರಾಣೇಶ್ ದಂಪತಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೆಡಿಪಿ ಸಭೆಯಲ್ಲಿ ಭಾಗಿಯಾದವರೆಲ್ಲರಿಗೂ ಕ್ವಾರಂಟೈನ್ ಆಗಲು ಜಿಲ್ಲಾಡಳಿತ ಆದೇಶ ಮಾಡಿದೆ.
ಈಗಾಗಲೇ 36 ಕ್ಕೂ ಹೆಚ್ಚು ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಕ್ವಾರಂಟೈನ್ ಆಗಿದ್ದಾರೆ. ಆದರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಮಾತ್ರ ಕ್ವಾರಂಟೈನ್ ಆಗಿರಲಿಲ್ಲ. ಅಲ್ಲದೆ ಮಾಸ್ಕ್ ಹಾಕದೇ ಎಲ್ಲಾ ಕಡೆ ಓಡಾಟ ನಡೆಸಿದ್ದರು ಮತ್ತು ಜುಲೈ 5 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಸಧ್ಯ ಜಿಲ್ಲಾಡಳಿತದ ಆದೇಶದ ಮೇರೆಗೆ ಹೋಮ್ ಕ್ವಾರಂಟೈನ್ ಆಗಿದ್ದಾರೆ.