ಚಿಕ್ಕಮಗಳೂರು: ತಾಲೂಕಿನ ಮುಳ್ಳಯ್ಯನಗಿರಿ ಶ್ರೇಣಿಯ, ಕವಿಕಲ್ ಗಂಡಿಯ ಕೆಳ ಭಾಗದಲ್ಲಿ ಶೋಲಾ ಕಾಡು ಹುಲ್ಲುಗಾವಲಿನ ಸರ್ಕಾರಿ ಭೂಮಿಯಲ್ಲಿ ಬೆಂಗಳೂರು ಮೂಲದ ಕೆಲವರು ಅಕ್ರಮ ರೆಸಾರ್ಟ್, ಹೋಂ ಸ್ಟೇ, ಪ್ರವಾಸಿ ಕಟ್ಟಡ ಕಟ್ಟಲು ಹೊರಟಿದ್ದಾರೆಂದು ಜಿಲ್ಲೆಯ ವನ್ಯಜೀವಿ ಪರಿಪಾಲಕ ವೀರೇಶ್ ಆರೋಪ ಮಾಡಿದ್ದಾರೆ.
ಇಲ್ಲಿ ಭೂಮಿ ಪರಿವರ್ತಿಸದೆ, ಭೂಮಿಯನ್ನು ಅಗೆದು ಕಾಂಕ್ರೀಟ್ ಪಿಲ್ಲರ್ ಹಾಕಲು ಕಾಮಗಾರಿ ಪ್ರಾರಂಭಿಸಿದ್ದು, ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದಿಲ್ಲ. ಅರಣ್ಯ ಇಲಾಖೆ, ಮಾಲಿನ್ಯ ಮಂಡಳಿ, ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆಯದೆ ಕೆಲಸ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಮುಳ್ಳಯ್ಯನಗಿರಿ ಸಂರಕ್ಷಣ ಮೀಸಲು ಪ್ರದೇಶ ಘೋಷಣೆ ಆಗುತ್ತಿದ್ದು, ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಲಾಕ್ಡೌನ್ ಲಾಭ ಪಡೆದ ಕೆಲವರು ಯಾವುದೇ ಅಗತ್ಯ ಅನುಮತಿ ಇಲ್ಲದೆ ಪ್ರವಾಸೋದ್ಯಮ ಕಟ್ಟಡ ಕಟ್ಟಲು ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.
ವನ್ಯ ಜೀವಿ ಪರಿಪಾಲಕನಿಂದ ಆರೋಪ ಸರ್ವೇ ನಂಬರ್ 44 ಸರ್ಕಾರಿ ಭೂಮಿ ಆಗಿದ್ದು, ಹುಲ್ಲುಗಾವಲು ಪ್ರದೇಶವಾಗಿದೆ. ಈ ಭಾಗದಲ್ಲಿ ಹೋಂ ಸ್ಟೇ ಹೆಸರಿನಲ್ಲಿ ಕಟ್ಟಡಗಳು ಬರುತ್ತಿದ್ದು, ಎಲ್ಲವೂ ಕಾಂಕ್ರೀಟ್ ಕಾಡು ಆಗುವ ಆತಂಕ ಕಾಡುತ್ತಿದೆ. ಈ ಭಾಗದ ವನ್ಯ ಜೀವಿಗಳ ಮುಕ್ತ ಸಂಚಾರಕ್ಕೆ ಹಾಗೂ ಅವುಗಳ ಆವಾಸ ಸ್ಥಾನ ಕೂಡ ಹಾಳಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ಗಿರಿ ಪ್ರದೇಶದಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಹೆಸರಿನ ಅಕ್ರಮ ಕಟ್ಟಡಗಳನ್ನು ತೆರವು ಮಾಡಿ ಗಿರಿ ಶ್ರೇಣಿ ರಕ್ಷಿಸಬೇಕು ಎಂದು ವನ್ಯ ಜೀವಿ ಪರಿಪಾಲಕ ಜಿ.ವೀರೇಶ್ ಆಗ್ರಹಿಸಿದ್ದಾರೆ.