ಚಿಕ್ಕಮಗಳೂರು:ತಾಲೂಕಿನ ಇನಾಂ ದತ್ತಾತ್ರೇಯ ಪೀಠಕ್ಕೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ಪಾದುಕೆ ದರ್ಶನ ಪಡೆದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದತ್ತ ಪೀಠದಲ್ಲಿ ಅರ್ಚಕರು, ರುದ್ರಾಭಿಷೇಕ, ಶಂಖನಾದ, ಆರತಿ ಇದೆಲ್ಲವನ್ನು ನೋಡಿ, ಕೇಳಿ ನಿಜಕ್ಕೂ ನಾನು ಧನ್ಯನಾದೆ. ಸುದೀರ್ಘ ಹೋರಾಟಕ್ಕೆ ನಿಜವಾದ ಬೆಲೆ ಈಗ ಸಿಕ್ಕಿದೆ. ಅದಕ್ಕೆ ಕಾರಣಕರ್ತರಾದ ರಾಜ್ಯ ಸರ್ಕಾರ ಮತ್ತು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಧನ್ಯವಾದ ತಿಳಿಸಿದರು.
ಮುಸ್ಲಿಂ ಸಮುದಾಯಕ್ಕೊಂದು ಮನವಿ:ಇನಾಂ ದತ್ತಾತ್ರೇಯ ಪೀಠಕ್ಕೆ ಸಂಬಂಧಿಸಿ ನಮ್ಮ 30 ವರ್ಷಗಳ ಸುದೀರ್ಘ ಹೋರಾಟಕ್ಕೆ ಈಗ ನಿಜವಾದ ಜಯ ಸಿಕ್ಕಿದೆ. ಸೌಹಾರ್ಧಯುತವಾಗಿ ಒಳಗಡೆ ಪಾದುಕೆ ಪೂಜೆ ನಡೆಯುತ್ತಿದೆ. ಆರತಿ, ರುದ್ರಾಭಿಷೇಕ, ಅರ್ಚನೆ, ಶಂಖನಾದ ಇವೆಲ್ಲವೂ ಆಗುತ್ತಿದೆ. ಇದೆಲ್ಲವೂ ಇಸ್ಲಾಂ ಧರ್ಮೀಯರಾದ ನಿಮಗೆ ನಿಷಿದ್ಧ. ಹೀಗಾಗಿ ನೀವು ದತ್ತಾಪೀಠ ಬಿಟ್ಟು ನಾಗೇನಹಳ್ಳಿಯಲ್ಲಿ ಪೂಜೆ ಮಾಡಿಕೊಳ್ಳಿ. ಅಲ್ಲದೇ ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬದವರಿಗೆ ಗರ್ಭ ಗುಡಿ ಪ್ರವೇಶ ನಿಷೇಧಿಸಬೇಕು. ಖುರಾನ್ ಪ್ರಕಾರ ಇದು ನಿಷಿದ್ಧ. ನೀವಂತೂ ಹೋಗಲೇಬೇಡಿ ಎಂದು ಮನವಿ ಮಾಡಿದರು.
ಕೊರಿಯರ್ ಮಿಕ್ಸಿ ಬ್ಲಾಸ್ಟ್ ಪ್ರಕರಣ: ಹಾಸನದಲ್ಲಿ ಕೊರಿಯರ್ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇದು ಕೂಡ ಭಯೋತ್ಪಾದಕ ಕೃತ್ಯ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಂತೆ ಇದೂ ಕೂಡ ಒಂದು ಕುಕೃತ್ಯ. ಶಾರಿಕ್ ಮುಖಾಂತರ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿಸಿದ್ರು. ಇದೀಗ ಮತ್ತೊಂದು ಬಾಂಬ್ ಬ್ಲಾಸ್ಟ್ ಹಾಸನದಲ್ಲಿ ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಕೃತ್ಯಗಳು ಸ್ತಬ್ಧವಾಗಿದೆ. ಈ ಕಾರಣಕ್ಕೆ ತಡೆಯಲಾಗದೇ ಇಂತಹ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ ಎಂದು ಹೇಳಿದರು.