ಚಿಕ್ಕಮಗಳೂರು: ಮನೋರೋಗಿ ತಂದೆ ಹಾಗೂ ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿ. ಈ ಮಧ್ಯೆ ತಮ್ಮ ವಿದ್ಯಾಭ್ಯಾಸ ಹಾಗೂ ಸುಂದರ ಬದುಕು ಕಟ್ಟಿಕೊಳ್ಳಲು ಇಬ್ಬರು ಹುಡುಗಿಯರು ಪ್ರತಿನಿತ್ಯ ಹೋರಾಟ ಮಾಡುತ್ತಿದ್ದಾರೆ. ಬಡತನ ಬೇಗೆಯಲ್ಲಿ ಬೆಂದು ಹೋಗಿರುವ ಒಂದು ಕುಟುಂಬಕ್ಕೆ, ಸರಿಯಾದ ಆಸರೆ ಇಲ್ಲದೇ ಪ್ರತಿನಿತ್ಯ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡುವಂತಾಗಿದೆ.
ಮಾನಸಿಕ ಅಸ್ವಸ್ಥನಾಗಿ ನೆಲ ಹಿಡಿದು ಕೊಳಕು ಹೊದಿಕೆ ಹೊದ್ದು, ಕೊಟ್ಟಿಗೆಯಂತಹ ಜಾಗದಲ್ಲಿ ತಂದೆ ಮಲಗಿದ್ದರೆ, ಇತ್ತ ಈಗಲೋ ಆಗಲೋ ಬೀಳುವ ಗುಡಿಸಿಲಿನಲ್ಲಿ ತಾಯಿ ಬದುಕುತ್ತಿದ್ದಾರೆ. ಸೂರಿಲ್ಲದ ಊರಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಇಬ್ಬರು ಹೆಣ್ಣು ಮಕ್ಕಳು ಹೆಣಗಾಡುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದ ಸೋಮನಕಟ್ಟೆಯ ಗ್ರಾಮದ ಬಡ ಕುಟುಂಬದ ದಾರುಣ ಕಥೆಯಿದು. ಈ ಗ್ರಾಮದಲ್ಲಿ ವಾಸವಾಗಿರುವ ಗಿರಿ ಜನ ಪಂಗಡಕ್ಕೆ ಸೇರಿರುವ ಈ ಕುಟುಂದ ಸ್ಥಿತಿ ಕರುಣಾಜನಕ. ಈ ಹಿಂದೇ ಎಲ್ಲರಂತೆ ಆರೋಗ್ಯವಾಗಿದ್ದ ಮನೆಯ ಮಾಲೀಕ ಲೋಕೇಶ್ ಮತ್ತು ಆತನ ಪತ್ನಿ ಸರೋಜಾ ಎಲ್ಲರಂತೆ ಜೀವನ ಮಾಡಿಕೊಂಡು ತಮ್ಮದೇ ಪ್ರಪಂಚದಲ್ಲಿ ಇದ್ದರು. ಇವರಿಗೆ ಇಬ್ಬರೂ ಮುದ್ದಾದ ಹೆಣ್ಣು ಮಕ್ಕಳಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಂದೂ ಅಕ್ಕ ಪಕ್ಕದ ಜನರ ಮನಸ್ಸು ಗೆದ್ದಿದ್ದರು. ಆದರೆ ಅದ್ಯಾಕೋ ಆ ದೇವರಿಗೆ ಈ ಕುಟುಂಬದ ಮೇಲೆ ಮುನಿಸು, ದಿನ ಕಳೆದಂತೆ ಮಾನಸಿಕವಾಗಿ ಕುಗ್ಗಿ ಹೋದ. ಮನೆಯ ಮಾಲೀಕ ಲೋಕೇಶ್ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದು ಮಲಗಿದ್ದಲೇ ಮಲಗಿದ್ದಾರೆ.
ಬದುಕಿಗೆ ಆಸರೆಯಿಲ್ಲದೇ ಪರದಾಡುತ್ತಿರುವ ಬಡ ಕುಟುಂಬ ಲೋಕೇಶ್ ಪತ್ನಿ, ಗಂಡನ ಆರೋಗ್ಯ ಸರಿ ಮಾಡಲು ಹಲವಾರು ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇರುವ ಮುರುಕಲು ಮನೆಯಲ್ಲಿ ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಸಲಹಲು ಪ್ರಾರಂಭ ಮಾಡಿದ್ದು, ನೆಮ್ಮದಿಯ ಜೀವನ ನಡೆಸಲು ಆ ವಿಧಿ ಮಾತ್ರ ಇವರಿಗೆ ಬಿಡುತ್ತಿಲ್ಲ. ಈಗ ಲೋಕೇಶ್ ಕಾಲಿನ ಸ್ವಾಧೀನ ಕಳೆದುಕೊಂಡಿದ್ದು, ಮಾನಸಿಕ ಸ್ಥಿಮಿತ ಇಲ್ಲದಂತಾಗಿದೆ. ಲೋಕೇಶ್ ಮನೆಯಲ್ಲಿರುವ ಪಾತ್ರೆಗಳನ್ನು ಹೊರಗಡೆ ಬಿಸಾಡಿ ಹೆಂಡತಿ ಮಕ್ಕಳನ್ನು ಹೊರ ತಳ್ಳಿದ್ದಾನೆ. ಮನೆಯ ಪಕ್ಕದಲ್ಲಿಯೇ ಇರುವ ಜಾಗದಲ್ಲಿ ಒಂದು ಪೇಪರ್ ಜೋಪಡಿ ಹಾಕಿಕೊಂಡು ಸರೋಜಾ, ತನ್ನ ಇಬ್ಬರೂ ಹೆಣ್ಣು ಮಕ್ಕಳ ಜೊತೆ ಜೀವನ ಮಾಡುತ್ತಿದ್ದು, ಈ ಯೋಚನೆಯಲ್ಲಿ ಇವರ ಆರೋಗ್ಯವೂ ಹದಗೆಟ್ಟಿದೆ.
ಸರಿಯಾದ ದಾರಿ, ಶೌಚಾಲಯ, ಸ್ನಾನದ ಗೃಹ, ಮಲಗಲು ಜಾಗವಿಲ್ಲದೇ ಈ ಕುಟುಂಬ ನರಳಾಟ ನಡೆಸುತ್ತಿದೆ. ಕಾಡಿನ ಮಧ್ಯೆ ಹಾವು, ಜಿಗಣೆ, ಹುಳಗಳ ಮಧ್ಯೆ ನರಕದ ಜೀವನ ನಡೆಸುತ್ತಿರುವ ಮಧ್ಯೆಯೇ ಈ ಇಬ್ಬರೂ ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡುವ ಆಸಕ್ತಿ ಇದೆ. ಇವರ ಮಕ್ಕಳಾದ ಕೀರ್ತನಾ ಹೊರನಾಡು ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರೇ, ಇನ್ನೊಬ್ಬಳು ಸ್ಪಂದನಾ ಪರಿಚಯಸ್ಥರ ಮನೆಯಲ್ಲಿದ್ದುಕೊಂಡು ಬೆಳ್ತಂಗಡಿಯಲ್ಲಿ ಪಿಯುಸಿ ಓದುತ್ತಿದ್ದಾಳೆ.
ಸ್ಪಂದನಾ 10 ನೇ ತರಗತಿಯಲ್ಲಿ ಶೇ. 75ರಷ್ಟು ಅಂಕ ಪಡೆದಿದ್ದು, ಇನ್ನಷ್ಟು ಓದುವ ಆಸಕ್ತಿ ಹೊಂದಿದ್ದಾಳೆ. ಈ ಇಬ್ಬರೂ ಮಕ್ಕಳಲ್ಲಿ ಒಬ್ಬಳು ಕೀರ್ತನಾ ಅಪ್ಪ - ಅಮ್ಮನ ಹಾರೈಕೆ ಮಾಡುತ್ತಿದ್ದರೇ, ಸ್ಪಂದನಾ ಕಾಲೇಜು ಮುಗಿಸಿ ನಂತರ ಕೆಲಸ ಮಾಡಿ ಬರುವಂತಹ ಹಣದಿಂದ ಈ ಕುಟುಂಬ ನಡೆಸುತ್ತಿದ್ದಾಳೆ.
ಲಾಕ್ಡೌನ್ ವೇಳೆ ಸ್ಪಂದನಾಳ ಕೆಲಸವೂ ಹೋಗಿದ್ದು, ಈಗ ಮನೆಗೆ ಬಂದೂ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾ, ದಿನ ನಿತ್ಯ ಸಿಗುವ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಆನ್ಲೈನ್ ತರಗತಿಗಳು ಕೂಡ ಪ್ರಾರಂಭವಾಗಿದ್ದು, ಮೊಬೈಲ್ ತೆಗೆದುಕೊಳ್ಳಲು ಇವರ ಬಳಿ ಹಣವಿಲ್ಲ. ಆದರೇ ಓದಲೇಬೇಕು ಎಂಬ ಉತ್ಸಾಹ ಈ ಇಬ್ಬರೂ ಹೆಣ್ಣು ಮಕ್ಕಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯಾರಾದರೂ ದಾನಿಗಳು ಈ ಕುಟುಂಬಕ್ಕೆ ಸಹಾಯ ಮಾಡಿದರೇ ಈ ಜೀವಗಳು ಬದುಕು ಕಟ್ಟಿಕೊಳ್ಳೋದಕ್ಕೆ ಸಹಕಾರಿ ಆಗಲಿದೆ.