ಕರ್ನಾಟಕ

karnataka

ETV Bharat / state

ಪ್ರಕೃತಿಯ ಮಾನಸಪುತ್ರಿ ಈ ''ಕಲ್ಲತ್ತಿಗಿರಿ'': ಈ ಸೊಬಗು ಸವಿಯಲು ಜನರ ದಂಡು - Kallatti falls history

ಒಂದು ತಿಂಗಳ ಹಿಂದೆ ಇತ್ತ ಬರಬೇಡಿ ಅಂತಿದ್ದ ಆ ಸುಂದರ ತಾಣವೀಗ, ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಇಲ್ಲಿ ವರ್ಷ ಪೂರ್ತಿ ಧಾರಾಕಾರವಾಗಿ ಹರಿಯೋ ಆ ನೀರು ಎಲ್ಲಿಂದ ಬರುತ್ತೆ ಅನ್ನೋದೇ ನಿಗೂಢ.

Kallatti falls
ಕಲ್ಲತ್ತಿಗಿರಿ

By

Published : Sep 25, 2020, 6:36 PM IST

ಚಿಕ್ಕಮಗಳೂರು: ಕಲ್ಲತ್ತಿಗಿರಿ ಕ್ಷೇತ್ರದ ಜಲಪಾತ ಹತ್ತಾರು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ. ಮೂಲವೇ ಗೊತ್ತಿಲ್ಲದ ಗಂಗೆಯ ಉಗಮ ಸ್ಥಾನ ಒಂದೆಡೆಯಾದರೆ, ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತೊಂದು ಆಕರ್ಷಣೆ. ಆನೆಯ ಆಕಾರದಲ್ಲಿ ಧುಮ್ಮಿಕ್ಕೋ ಆ ಜಲಧಾರೆಗೆ ಧಾರ್ಮಿಕ ನಂಬಿಕೆಯೂ ಉಂಟು. ತಿಂಗಳ ಹಿಂದೆ ಪ್ರವಾಹದಂತೆ ಹರಿಯುತ್ತಿದ್ದ ಆ ಸುಂದರ ತಾಣವೀಗ ನಯನ ಮನೋಹರ.

ಕಲ್ಲತ್ತಿಗಿರಿ

ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತವೀಗ ಪ್ರಕೃತಿಯ ಮಾನಸ ಪುತ್ರಿಯಂತಾಗಿದೆ. ಗುಡ್ಡದ ತುದಿಯಿಂದ ಹರಿಯೋ ಈ ಹಾಲ್ನೊರೆಯ ಜಲಪಾತವೇ ಕಲ್ಲತ್ತಿಗಿರಿ ಜಲಪಾತ. ಈ ಜಲಪಾತ ಇತಿಹಾಸದಲ್ಲಿ ಬತ್ತಿದ ಉದಾಹರಣೆಯೇ ಇಲ್ಲ. ಬೆಟ್ಟ-ಗುಡ್ಡಗಳ, ಔಷಧ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯೋ ಈ ನೀರಲ್ಲಿ ಸ್ನಾನ ಮಾಡಿದರೆ ಕೆಲ ಕಾಯಿಲೆಗಳು ದೂರವಾಗಿ ಪುಣ್ಯ ಬರುತ್ತೆ ಅನ್ನೋದು ಜನರ ನಂಬಿಕೆ.

ಆನೆ ಆಕಾರದಲ್ಲಿರೋ ಈ ಜಲಪಾತಕ್ಕೆ ಧಾರ್ಮಿಕ ಇತಿಹಾಸವೂ ಇದೆ. ಜನರು ಈ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಇಲ್ಲಿನ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿದರೆ, ಅವರ ಪಾಪ - ಕರ್ಮಗಳೆಲ್ಲಾ ಪರಿಹಾರವಾಗುತ್ತಂತೆ. ಈ ಕ್ಷೇತ್ರದಲ್ಲಿ ಕಲ್ಲಿನ ಗುಹೆಯೊಳಗೆ ವೀರಭದ್ರಸ್ವಾಮಿ ಮೂರ್ತಿ ಕೂಡ ಉದ್ಭವವಾಗಿದೆ. ಇಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿದರೇ ಜನರ ಮೈಮೇಲೆ ಬರುವ ದುಷ್ಟಶಕ್ತಿಗಳನ್ನ ವೀರಭದ್ರಸ್ವಾಮಿ ನಾಶ ಮಾಡುತ್ತಾನೆ ಅನ್ನೋದು ಸ್ಥಳೀಯರ ನಂಬಿಕೆ. ಆದ್ದರಿಂದ, ನಿತ್ಯ ಹತ್ತಾರು ಜನ ಈ ಕ್ಷೇತ್ರಕ್ಕೆ ದೇವರುಗಳನ್ನ ಕರೆತಂದು ಪೂಜಾ-ಕೈಂಕರ್ಯ ಕೈಗೊಳ್ಳುತ್ತಾರೆ. ಪೂಜೆಯ ಬಳಿಕ ಇಲ್ಲಿನ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯ ಕಂಡು ಪುಳಕಿತರಾಗುತ್ತಾರೆ.

ಈ ಜಲಪಾತಕ್ಕೆ ಹೋಗುವ ಮುಳ್ಳಯ್ಯನಗಿರಿ ಮಾರ್ಗದಲ್ಲಿ ರಮಣೀಯ ನೋಟ ಕಣ್ಣಿಗೆ ರಸದೌತಣ ನೀಡುತ್ತದೆ. ಹಚ್ಚಹಸಿರಿನ ಪ್ರಕೃತಿಯ ಸೊಬಗು ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಳಸಿ ಇಲ್ಲಿನ ಸೌಂದರ್ಯವನ್ನ ಹಾಳು ಮಾಡುತ್ತಿರೋದೇ ದುರಂತ.

ABOUT THE AUTHOR

...view details