ಚಿಕ್ಕಮಗಳೂರು:ಗುಂಡಿ ಬಿದ್ದ ರಸ್ತೆ ನೋಡಲು ಬಂದ ಅಧಿಕಾರಿಗಳಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಕಳಸ ಪಟ್ಟಣದಲ್ಲಿ ನಡೆದಿದೆ. ಕಳೆದ ನಾಲ್ಕೈದು ತಿಂಗಳಿನಿಂದಲೂ ಕೂಡ ರಸ್ತೆಯಲ್ಲಿ ತೀವ್ರವಾದ ಗುಂಡಿ ಬಿದ್ದಿದ್ದವು. ಜನ ಸಾಮಾನ್ಯರು ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿತ್ತು.
ರಸ್ತೆ ನೋಡಲು ಬಂದ ಅಧಿಕಾರಿಗಳಿಗೆ ಮಲೆನಾಡಿಗರು ಫುಲ್ ಕ್ಲಾಸ್ ಈ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳಸ ಭಾಗದಲ್ಲಿ ಆಗಾಗ್ಗೆ ಸಾಕಷ್ಟು ಮಳೆ ಕೂಡ ಸುರಿಯುತ್ತೆ. ಮಳೆ ಸುರಿದಾಗ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ಓಡಾಡುವುದು ಮತ್ತಷ್ಟು ಕಷ್ಟವಾಗಿತ್ತು. ಪಾದಚಾರಿಗಳು ಕೂಡ ಓಡಾಡುವುದು ಕಷ್ಟವಾಗಿತ್ತು. ಬೈಕ್‍ಗಳಲ್ಲಿ ಹೋಗುವಾಗ ನೀರು ತುಂಬಿದ ಗುಂಡಿಗಳ ಅರಿವಾಗದೆ ಬೀಳುವವರ ಸಂಖ್ಯೆಯೂ ಹೆಚ್ಚಿತ್ತು. ಹಾಗಾಗಿ, ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಕೊನೆಗೂ ಕಳಸ ಪಟ್ಟಣದ ಹೊರನಾಡು ರಸ್ತೆ ವೀಕ್ಷಣೆಗೆ ಬಂದ ಇಂಜಿನಿಯರ್ ಮಂಜುನಾಥ್‍ಗೆ ಸ್ಥಳೀಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಳೆ ಬಂದು ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಜನ ಬಿದ್ದು-ಎದ್ದು ಹೋದ ಮೇಲೆ ಬಂದ್ರಾ ಎಂದು ಗರಂ ಆಗಿದ್ದರು. ಜನರ ಆಕ್ರೋಶ ಕಂಡು ಅಧಿಕಾರಿಯೇ ಕಂಗಾಲಾಗಿದ್ದರು. ನಿಮ್ಮ ಕಾರ್ಯಸ್ಥಳ ಕಳಸ. ನೀವು ಕಳಸದಲ್ಲೇ ಇರಬೇಕು. ಯಾವಾಗಲು ಏಕೆ ಮೂಡಿಗೆರೆಯಲ್ಲಿ ಇರುತ್ತೀರಾ? ಎಂದು ಸ್ಥಳೀಯರು ಅಧಿಕಾರಿಗೆ ಪ್ರಶ್ನಿಸಿದ್ದಾರೆ.
ಶೀಘ್ರದಲ್ಲೇ ರಸ್ತೆ ದುರಸ್ತಿ ಭರವಸೆ:ಸ್ಥಳೀಯರ ಆಕ್ರೋಶ ಹಾಗೂ ಪ್ರಶ್ನೆಗೆ ಕಂಗಾಲಾದ ಇಂಜಿನಿಯರ್ ಮಂಜುನಾಥ್ ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಕಳಸದ ಜೆಡಿಎಸ್ ಮುಖಂಡ ರವಿ ರೈ ಎನ್ನುವವರು ಇಂಜಿನಿಯರ್ ಮಂಜುನಾಥ್ ವಿರುದ್ಧ ಕಳಸ ಠಾಣೆಯಲ್ಲಿ ದೂರು ನೀಡಿದ್ದರು. ರಸ್ತೆಗೆ ಜಲ್ಲಿ ಕಲ್ಲು ತಂದು ಸುರಿದಿದ್ದಾರೆ. ರಸ್ತೆಯನ್ನೂ ಮಾಡುತ್ತಿಲ್ಲ. ಈಗ ಜಲ್ಲಿಕಲ್ಲು ಹಾಕಿರುವ ರಸ್ತೆಯಲ್ಲೇ ಓಡಾಡುವುದು ತೀವ್ರ ಕಷ್ಟವಾಗಿದೆ. ಎಷ್ಟೇ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ, ರಸ್ತೆಯನ್ನ ದುರಸ್ತಿ ಮಾಡಲಿ ಅಥವಾ ಜಲ್ಲಿ ಕಲ್ಲನ್ನ ತೆಗೆಸಲಿ ಎಂದು ದೂರು ನೀಡಿದ್ದರು.
ಓದಿ:ಬಿಜೆಪಿ ಯಾರನ್ನೂ ಮುಗಿಸಲು ಹೊರಟಿಲ್ಲ: ಸಚಿವ ಅಶ್ವತ್ಥನಾರಾಯಣ