ಚಿಕ್ಕಮಗಳೂರು : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿ, ಸಂಜೆ 6 ಗಂಟೆವರೆಗೂ ಶಾಂತಿಯುತ ಮತದಾನವಾಗಿದೆ. ಜಿಲ್ಲೆಯಲ್ಲಿ ನಡೆದ ಚುನಾವಣೆಯ ಪ್ರಮುಖ ಘಟನೆಗಳ ಚಿತ್ರಣ ಇಲ್ಲಿದೆ.
ಚಿಕ್ಕಮಗಳೂರು ಜಿಲ್ಲಾದ್ಯಾಂತ ಶಾಂತಿಯುತ ಮತದಾನ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ತುಂಬಾ ಶಾಂತಿಯುತವಾಗಿ ಪ್ರಾರಂಭವಾಗಿ ಅಷ್ಟೇ ಅಷ್ಟೇ ಶಾಂತಿಯುತವಾಗಿ ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ 1222 ಮತಗಟ್ಟೆಗಳನ್ನು ಸ್ಥಾಪನೆ ಮಾಡಿದ್ದು, 9.33 ಲಕ್ಷ ಮತದಾರರ ಪೈಕಿ ಗರಿಷ್ಠ ಪ್ರಮಾಣದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲನೆಯದಾಗಿ ಬಾಳೆಹೊನ್ನೂರು ಶ್ರೀಗಳು ಬಾಳೆಹೊನ್ನೂರು ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಶಾಸಕ ಸಿ ಟಿ ರವಿ, ಶೃಂಗೇರಿ ಶಾಸಕ ರಾಜೇಗೌಡ, ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಜಿಲ್ಲೆಯ ಪ್ರಮುಖ ಗಣ್ಯರು ತಮ್ಮ ಹಕ್ಕನ್ನು ಬೆಳಗ್ಗೆಯೇ ಚಲಾಯಿಸಿದರು.
ಮತದಾನ ನಡೆಯುವ ವೇಳೆ ಜಿಲ್ಲೆಯಲ್ಲಿ 45ಕ್ಕೂ ಹೆಚ್ಚು ಕಡೆ ಕೆಲ ಕ್ಷಣಗಳ ಕಾಲ ಮತ ಯಂತ್ರ ಕೈ ಕೊಟ್ಟಿದ್ದು ನಂತರ ಸರಿಯಾಗಿ ಕಾರ್ಯ ನಿರ್ವಹಿಸಿದವು. ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಜನರು ಮತಗಟ್ಟೆ ಬದಲಾವಣೆ ಮಾಡಿದ ಪರಿಣಾಮ ಗ್ರಾಮದ ಎಲ್ಲಾ ಜನರು ಚುನಾವಣೆ ಬಹಿಷ್ಕಾರ ಮಾಡಿದರು.
ಬೈಗೂರು ಗ್ರಾಮದಲ್ಲಿ ಮತದಾರ ಪಟ್ಟಿಯಲ್ಲಿ ಕೆಲವರ ಹೆಸರು ಬಿಟ್ಟು ಹೋದ ಕಾರಣ ಚುನಾವಣಾ ಅಧಿಕಾರಿಗಳ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮೂಡಿಗೆರೆಯಲ್ಲಿ ಶಾಸಕ ಎಂ ಪಿ ಕುಮಾರಸ್ವಾಮಿ ವಯಸ್ಸಾದ ಮಹಿಳೆಯನ್ನು ವೀಲ್ ಚೇರ್ನಲ್ಲಿ ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನ ಮಾಡಿಸಿದ್ದು ವಿಶೇಷವಾಗಿತ್ತು.
ಬೆಂಗಳೂರಿನಿಂದ ಮತ ಮಾಡದೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಕೆಲವರಿಗೆ ಶಾಲು, ಎ ಟಿ ಎಂ, ಪ್ಯಾನ್, ಡೆಬಿಟ್ ಕಾರ್ಡ್ಗಳ ಹಾರ ಮಾಡಿ ಸನ್ಮಾನ ಮಾಡಿ ಮತದಾನದ ಮಹತ್ವ ತಿಳಿಸಲಾಯಿತು.
ಒಟ್ಟಾರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ವರದಿ ಆಗಿಲ್ಲ. ಜಿಲ್ಲೆಯಲ್ಲಿ ಗರಿಷ್ಠಮಟ್ಟದಲ್ಲಿ ಚುನಾವಣೆ ನಡೆದು ಸಂಜೆ 6 ಗಂಟೆಗೆ ಮುಕ್ತಾಯವಾಯಿತು.