ಶಿವಮೊಗ್ಗ/ಚಿಕ್ಕಮಗಳೂರು: ಸೆ.15ರ ಒಳಗೆ ಪಂಚಮಸಾಲಿ ಮೀಸಲಾತಿಯನ್ನು ನೀಡದೆ ಹೋದ್ರೆ, ಅ.1ರಂದು ಅಂದರೆ ಜೆ.ಹೆಚ್.ಪಟೇಲರ ಜನ್ಮದಿನದಂದು ಮತ್ತೆ ಹೋರಾಟ ಆರಂಭಿಸುವುದಾಗಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜಯಮೃತ್ಯುಂಜಯ ಸರ್ಕಾರಕ್ಕೆ ಎಚ್ಚರಿಕೆ ಇದುವರೆಗೂ ನಮಗೆ ಸಿಎಂ ಬಸವರಾಜ ಬೊಮ್ಮಯಿಯವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಬಂದು ಕಾಲಾವಕಾಶವನ್ನು ಕೇಳಿದ್ದಾರೆ. ಅವರು ತಾವು ನೀಡಿದ ಸಮಯದೊಳಗೆ ಬೇಡಿಕೆ ಈಡೇರಿಸದೆ ಹೋದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಹಳೇ ಮೈಸೂರು ಭಾಗವಾದ ಮಹದೇಶ್ವರ ಬೆಟ್ಟದಿಂದ 'ನುಡಿದಂತೆ ನಡೆಸಿ, ಮೀಸಲಾತಿ ನೀಡಿರಿ' ಎಂಬ ಅಭಿಯಾನ ಪ್ರಾರಂಭಿಸಲಾಗಿದೆ ಎಂದರು. ನಮ್ಮ ಅಭಿಯಾನ 1ನೇ ತಾರೀಖು ಬೆಂಗಳೂರು ತಲುಪುತ್ತೆ. ಅಂದು ಮೀಸಲಾಗಿತಿ ಸಿಕ್ಕರೆ ಅಭಿನಂದನಾ ಸಮಾರಂಭ, ಸಿಗದಿದ್ರೆ ಧರಣಿ ಮುಂದುವರಿಕೆ ಅನಿವಾರ್ಯ ಎಂದು ಹೇಳಿದರು.
ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಪ್ರಾರಂಭಿಸಿದಾಗ ಅಂದಿನ ಸಿಎಂ ಮೀಸಲಾತಿಗೆ ಆರು ತಿಂಗಳ ಕಾಲಾವಧಿ ಕೇಳಿದ್ರು. ಈಗ ಅವಧಿ ಮುಗಿಯುತ್ತಾ ಬಂದಿದೆ. ಇದರಿಂದ ಮತ್ತೆ ಅಭಿಯಾನ ನಡೆಸಲಾಗುತ್ತಿದೆ. ನಮ್ಮ ಪಂಚಮಸಾಲಿಯ ಮೀಸಲಾತಿಯ ಜೊತೆಗೆ ಉತ್ತರ ಕರ್ನಾಟಕದ ಇತರೆ ಲಿಂಗಾಯತ ಒಳಪಂಗಡಗಳಿಗೂ ಮೀಸಲಾತಿ ನೀಡಿ ಎಂಬ ಕೂಗು ಬಂದಿದೆ. ರಾಜ್ಯ ಸರ್ಕಾರದ 2A ಜೊತೆಗೆ ಕೇಂದ್ರದ ಒಬಿಸಿ ಪಟ್ಟಿಯಲ್ಲೂ ಸೇರಬೇಕು ಎಂಬ ಬೇಡಿಕೆ ಇದೆ ಎಂದರು.
'ಎಷ್ಟೇ ಅಪಮಾನ, ಅಡೆತಡೆ ಬಂದ್ರೂ ಮೀಸಲಾತಿ ಹೋರಾಟ ನಿಲ್ಲಿಸಲ್ಲ'
ಮೀಸಲಾತಿ ಹೋರಾಟವನ್ನು ಮೀಸಲಾತಿ ಪಡೆಯುವರೆಗೂ ಮುಂದುವರೆಸಲಾಗುವುದು. ನಮಗೆ ಎಷ್ಟೇ ಅಪಮಾನ, ಅವಮಾನ, ಅಡೆತಡೆಗಳು ಬಂದ್ರು ಸಹ ನಿಲ್ಲಿಸಲ್ಲ, ಮುಂದುವರೆಸಲಾಗುವುದು ಎಂದರು. ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಎಷ್ಟೆ ಅಪಮಾನವಾದ್ರೂ ಅದು ಒಳ್ಳೆಯದೇ ಎಂದು ಭಾವಿಸಿ ಹೋರಾಟ ನಡೆಸಲಾಗುವುದು ಎಂದರು.
ಈಸೂರಿನ ಹೋರಾಟಗಾರ ಸಾಹುಕಾರ್ ಬಸವಣ್ಯಪ್ಪನವರ ಸ್ಮಾರಕವನ್ನು ಶಿವಪುರದ ಮಾದರಿಯಲ್ಲಿ ಮಾಡಬೇಕು ಎಂಬ ಒತ್ತಾಯವಿದೆ. ಇಂದು ಮತ್ತು ನಾಳೆ ಜಿಲ್ಲೆಯಲ್ಲಿ ಅಭಿಯಾನ ಪ್ರವಾಸ ನಡೆಸಲಾಗುವುದು ಎಂದರು. ಈ ವೇಳೆ ಜಿಲ್ಲಾಧ್ಯಕ್ಷ ಮಹದೇವಪ್ಪ, ಮಾಜಿ ಶಾಸಕ ಚಂದ್ರಶೇಖರಪ್ಪ ಹಾಜರಿದ್ದರು.