ಚಿಕ್ಕಮಗಳೂರು :ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದ ಮುಳ್ಳಯ್ಯನಗಿರಿಗೆ ಆಗಮಿಸುವ ಪ್ರವಾಸಿಗರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಆದೇಶಿಸಿದ್ದಾರೆ.
ಮುಳ್ಳಯ್ಯನಗಿರಿಗೆ ದಿನಕ್ಕೆ 300 ವಾಹನಗಳಿಗಷ್ಟೇ ಅನುಮತಿ.. ಅದರಂತೆ ಮುಳ್ಳಯ್ಯನಗಿರಿಗೆ ದಿನಕ್ಕೆ 300 ವಾಹನಗಳು, 1200 ಪ್ರವಾಸಿಗರಿಗಷ್ಟೇ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ರಿಂದ 9 ಗಂಟೆಯ ತನಕ 150 ಗಾಡಿಗಳನ್ನು ಬಿಡಲಾಗುತ್ತಿದೆ. 600 ಪ್ರವಾಸಿಗರಿಗೆ ಮಾತ್ರ ಅನುಮತಿ ನೀಡಿದ್ದಾರೆ. ಮಧ್ಯಾಹ್ನ 2ರಿಂದ 4 ಗಂಟೆಯ ತನಕ 150 ವಾಹನಗಳಿಗೆ ಪ್ರವೇಶಕ್ಕೆ ಅನುಮತಿ ಇದೆ.
ಕೊರೊನಾ ಆತಂಕ ಹಿನ್ನೆಲೆ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೂ ನಿರ್ಬಂಧಗಳನ್ನು ವಿಧಿಸಿದ್ದಾರೆ. ಪ್ರವಾಸಿ ತಾಣದ ವಿಸ್ತೀರ್ಣದ ಆಧಾರದ ಮೇಲೆ ನಿರ್ಬಂಧಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಆದೇಶಿಸಿದ್ದಾರೆ.
ಕಳೆದೊಂದು ತಿಂಗಳಲ್ಲಿ ಮುಳ್ಳಯ್ಯನಗಿರಿಗೆ 87 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮಲೆನಾಡಿನ ಪ್ರವಾಸಿ ತಾಣಗಳಿಗೆ ಸಾಮಾನ್ಯವಾಗಿ ವೀಕೆಂಡ್ನಲ್ಲಿ ಪ್ರವಾಸಿಗರ ದಂಡೇ ಆಗಮಿಸಿ ಮೋಜು, ಮಸ್ತಿ ಮಾಡುತ್ತಿತ್ತು. ಆದರೆ, ಇದೀಗ ಜಿಲ್ಲಾಡಳಿತ ಈ ರೀತಿ ನಿರ್ಬಂಧ ವಿಧಿಸಿರುವುದು ಪ್ರವಾಸ ಪ್ರಿಯರಿಗೆ ಕೊಂಚ ನಿರಾಶೆ ಮೂಡಿಸಿದೆ.