ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಹುಲಿ ಉಗುರು ಪೆಂಡೆಂಟ್, ಕಾಡು ಪ್ರಾಣಿ ಚರ್ಮ ಜಪ್ತಿ ಪ್ರಕರಣಗಳು ಸಾಕಷ್ಟು ಸದ್ದು ಮಾಡಿವೆ. ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಆರೋಪದಡಿ ಇತ್ತೀಚೆಗೆ ಇಬ್ಬರು ಅರ್ಚಕರು ಹಾಗೂ ಕಳಸ ಡಿಆರ್ಎಫ್ಒ ಬಂಧನವಾಗಿತ್ತು. ಬಳಿಕ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಸಿಕ್ಕಿತ್ತು.
ಇದೀಗ ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆ ಒಳಿ ಇರುವ ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಆಗುತ್ತಿದ್ದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಸೆಲೆಬ್ರಿಟಿಗಳು ಹಾಗೂ ಸ್ವಾಮೀಜಿಗಳು ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್ ಆಗಿದ್ದು, ಇಲಾಖೆ ಕ್ರಮ ಕೈಗೊಂಡಿದೆ.