ಕರ್ನಾಟಕ

karnataka

ETV Bharat / state

Cardiac arrest : ಒಡಿಶಾ ರೈಲು ದುರಂತದಲ್ಲಿ ಪಾರಾಗಿದ್ದ ಚಿಕ್ಕಮಗಳೂರಿನ ವ್ಯಕ್ತಿ ಹೃದಯಾಘಾತದಿಂದ ಸಾವು

ಒಡಿಶಾದ ಭೀಕರ ರೈಲು ದುರಂತದಲ್ಲಿ ಬದುಕುಳಿದಿದ್ದ ಕರ್ನಾಟಕ ಮೂಲದ ಯಾತ್ರಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

odisha-train-disaster-survivor-dies-of-heart-attack-in-uttarpradesh
ಒಡಿಶಾ ರೈಲು ದುರಂತದಲ್ಲಿ ಪಾರಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

By

Published : Jun 10, 2023, 11:01 PM IST

ಚಿಕ್ಕಮಗಳೂರು:ಒಡಿಶಾದ ಭೀಕರ ರೈಲು ದುರಂತದಲ್ಲಿ ಬದುಕುಳಿದಿದ್ದ ಕರ್ನಾಟಕ ಮೂಲದ ಯಾತ್ರಿಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮ ಪಾಲಯ್ಯ (72) ಮೃತ ದುರ್ದೈವಿ. ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸದ 110 ಯಾತ್ರಿಕರು ರೈಲು ದುರಂತದಲ್ಲಿ ಬದುಕುಳಿದಿದ್ದರು. ಯಾತ್ರೆ ಮುಗಿಸಿ ಹಿಂದಿರುಗುವಾಗ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೇಷನ್‌ನಲ್ಲಿ ಹೃದಯಾಘಾತವಾಗಿ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶವ ಪರೀಕ್ಷೆಗಾಗಿ ಅವರ ಸಂಬಂಧಿಕರು ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಕಾಯುತ್ತಿದ್ದು, ನಾಳೆ ಅಥವಾ ನಾಡಿದ್ದು ಎಲ್ಲಾ ಪ್ರಯಾಣಿಕರು ಕಳಸಾ ತಾಲೂಕಿಗೆ ಆಗಮಿಸುವ ನಿರೀಕ್ಷೆ ಇದೆ.

ಒಡಿಶಾ ರೈಲು ದುರಂತದಿಂದ ಪಾರಾಗಿದ್ದ ಚಿಕ್ಕಮಗಳೂರಿನ ಯಾತ್ರಿಕರು:ಒಡಿಶಾದ ಬಾಲಸೋರ್​ ಜಿಲ್ಲೆಯ ಬಹಾನಗರ್​ನಲ್ಲಿ ನಡೆದಿದ್ದ ಭೀಕರ ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಸುಮಾರು 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನರು ಪ್ರಾಣಾಪಾಯದಿಂದ ಪಾರಾಗಿದ್ದರು. ಕಳಸ ತಾಲೂಕಿನ ಹೊರನಾಡು, ಸಂಸೆ, ಕುದುರೆಮುಖ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸೇರಿದ 110 ಮಂದಿ ಉತ್ತರ ಭಾರತದ ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೋಗಿದ್ದರು.

ಅವರು ಯಶವಂತಪುರ ರೈಲು ನಿಲ್ದಾಣದಿಂದ ಯಶವಂತಪುರ - ಹೌರಾ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಅಪಘಾತ ನಡೆಯುವ ಕೆಲವು ಗಂಟೆಗಳ ಹಿಂದೆ ರೈಲಿನ‌ ಬೋಗಿಗಳ ಇಂಜಿನ್ ಬದಲಾವಣೆ ಮಾಡಲಾಗಿತ್ತು. ಹಿಂದಿನ ಬೋಗಿಯಲ್ಲಿದ್ದ 110 ಯಾತ್ರಿಕರು ರೈಲಿನ ಎಸ್​3, ಎಸ್ 4 ಬೋಗಿಗಳಲ್ಲಿ ಇದ್ದರು. ಅದೃಷ್ಟವಶಾತ್​ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಘಟನೆ ಕುರಿತು ಪ್ರಯಾಣಿಕ ಸಂತೋಷ್​ ಜೈನ್ ಮಾಹಿತಿ ನೀಡಿ, ಅಪಘಾತಕ್ಕೀಡಾದ ಬೆಂಗಳೂರು-ಹೌರಾ ರೈಲಿನಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದೇವೆ. ನಾವು ಪ್ರಯಾಣಿಸುತ್ತಿದ್ದ ಬೆಂಗಳೂರು-ಹೌರಾ ರೈಲು ಒಡಿಶಾ ಗಡಿ ಪಾಸ್​ ಆಗಿ ಕೋಲ್ಕತ್ತಕ್ಕೆ ಹೋಗಬೇಕಿತ್ತು. ಪ್ರಯಾಣವೂ ಚೆನ್ನಾಗಿಯೇ ಆಗುತ್ತಿತ್ತು. ಆದರೆ ರಾತ್ರಿ 8:30ರ ಹೊತ್ತಿಗೆ ರೈಲು ಒಮ್ಮೆಲೇ ನಿಂತುಬಿಡ್ತು. ಬಸ್​ ಅಪಘಾತವಾದಾಗ ಹೇಗೆ ಶಬ್ದ ಬರುತ್ತದೆಯೋ, ಹಾಗೇ ಶಬ್ದ ಬಂತು. ಡಿಕ್ಕಿಯ ರಭಸಕ್ಕೆ ನಮ್ಮ ರೈಲಿನ ಕೆಲವು ಬೋಗಿಗಳು ಉರುಳಿ ಬಿದ್ದಿದ್ದವು. ಅವುಗಳಲ್ಲಿ ಇದ್ದವರಿಗೆ ಗಾಯವಾಗಿತ್ತು. ಕೆಲವರು ಸ್ಥಳದಲ್ಲೇ ಮೃತಪಟ್ಟರು ಎಂದಿದ್ದರು.

ರಾತ್ರಿ 12ರ ಹೊತ್ತಿಗೆ ಕೋಲ್ಕತ್ತಕ್ಕೆ ಬೇರೆ ರೈಲಿನ ವ್ಯವಸ್ಥೆ ಮಾಡಿದ್ದರು. ಹೀಗಾಗಿ 110 ಜನ ಯಾತ್ರಿಗಳು ಸುರಕ್ಷಿತವಾಗಿ ಕೋಲ್ಕತ್ತಾ ತಲುಪಿದ್ದೇವೆ. ಅಲ್ಲಿಂದ ಮೂರು ಬಸ್​ಗಳ ಮೂಲಕ ಶಿಖರಜಿಗೆ ಪ್ರಯಾಣ ಬೆಳೆಸಿದ್ದೇವೆ. ನಾವೆಲ್ಲರೂ ಸೇಫ್​ ಆಗಿದ್ದು, ಯಾತ್ರೆ ಮುಗಿಸಿ, ದೇವರ ದರ್ಶನ ಪಡೆದೇ ಬರುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ನವ ವಿವಾಹಿತನ ಬಲಿ ಪಡೆದ ಒಡಿಶಾ ರೈಲು ದುರಂತ: ಕುಟುಂಬಸ್ಥರ ಆಕ್ರಂದನ

ABOUT THE AUTHOR

...view details