ಚಿಕ್ಕಮಗಳೂರು: ಫೇಸ್ಬುಕ್ ಪೇಜ್ವೊಂದರಲ್ಲಿ ಹಾಕಿದ್ದ ಪೋಸ್ಗೆ ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಶ್ರೀಗಳ ವಿರುದ್ಧ ಅವಹೇಳನಕಾರಿ ಕಮೆಂಟ್ ಹಾಕಿದ್ದ ಮುನ್ನಾ ಅಜರ್ ಎಂಬಾತನಿಗೆ ಶೃಂಗೇರಿಯ ಜೆ.ಎಂ.ಎಫ್.ಸಿ ನ್ಯಾಯಾಲಯವು ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 3,300 ರೂಪಾಯಿಗಳ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
2015ರ ನವೆಂಬರ್ 19ರಂದು ಶೃಂಗೇರಿ ಹಿಂದೂಸ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಶೃಂಗೇರಿ ಶ್ರೀ ಮಠದ ಗುರು ಪರಂಪರೆ ಕುರಿತು ಮಾಹಿತಿ ನೀಡುವ ಫೋಸ್ಟ್ ಹಾಕಲಾಗಿತ್ತು. ಈ ಪೋಸ್ಟ್ಗೆ ಶ್ರೀಗಳ ಕುರಿತಾಗಿ ಮುನ್ನಾ ಅಜರ್ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ. ಈ ಕುರಿತಾಗಿ ಶೃಂಗೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶೃಂಗೇರಿ ಮಠದ ಹಾಗೂ ಶ್ರೀಗಳ ಭಕ್ತರು ಪ್ರತಿಭಟನೆ ನಡೆಸಿದ್ದರು. ಆರೋಪಿಯನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದರು.