ಚಿಕ್ಕಮಗಳೂರು: ಭಾರತದ ರಾಷ್ಟ್ರೀಯ ಪ್ರಾಣಿ ತನ್ನ ಸಂತತಿಯನ್ನು ಗಣನೀಯವಾಗಿ ಏರಿಸಿಕೊಂಡಿದೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. 526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, 442 ಹುಲಿಗಳು ಪತ್ತೆಯಾಗುವ ಮೂಲಕ ಉತ್ತರಾಖಂಡ್ ಮೂರನೇ ಸ್ಥಾನ ಪಡೆದುಕೊಂಡಿದೆ. ಇತ್ತೀಚಿನ ಹುಲಿ ಗಣತಿ ಪ್ರಕಾರ, ರಾಜ್ಯದಲ್ಲಿ 524 ಹುಲಿಗಳು ಕಂಡು ಬಂದಿದ್ದು, ಮಲೆನಾಡು ವಿಭಾಗದಲ್ಲೇ 371 ಹುಲಿಗಳಿವೆ ಎಂದು ಕಾವೇರಿ ವನ್ಯಜೀವಿ ಅಭಯಾರಣ್ಯ (ಸಿಡಬ್ಲ್ಯೂಎಸ್) ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮ ನೀಡಿದವರು ಮತ್ತು ವಿಜ್ಞಾನಿ ಉಲ್ಲಾಸ್ ಕಾರಂತ್ ಅವರು ಸಿಡಬ್ಲ್ಯೂಎಸ್ ಜೊತೆಗೂಡಿ ನಡೆಸಿದ ಸಮೀಕ್ಷೆಯಲ್ಲಿ ಮಲೆನಾಡು ವಿಭಾಗದಲ್ಲಿ ಈ ಅಂಕಿ - ಅಂಶ ಲಭ್ಯವಾಗಿದೆ. 1986ರಲ್ಲೇ ವೈಜ್ಞಾನಿಕವಾಗಿ ಹುಲಿಗಣತಿ ಕೈಗೊಳ್ಳಲಾಗಿತ್ತು. ಸೂಕ್ತ ತಂತ್ರಜ್ಞಾನದ ಕೊರತೆಯಿಂದಾಗಿ ಸಮೀಕ್ಷೆ ಕಷ್ಟವಾಗಿತ್ತು. ಅಂದು ನಡೆಸಿದ ಗಣತಿಯಲ್ಲಿ ಕೇವಲ 86 ಹುಲಿಗಳು ಪತ್ತೆಯಾಗಿದ್ದವು. ಈಗ ಹುಲಿಗಳ ಸಂತತಿ 371ಕ್ಕೆ ಏರಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ 37 ರಿಂದ 42 ಹುಲಿಗಳಿವೆ ಎಂಬ ಮಾಹಿತಿಯಿದೆ.
ಕಳೆದ ವರ್ಷ ಜಾಗತಿಕ ಹುಲಿ ದಿನದ ಸಂದರ್ಭದಲ್ಲಿ 4ನೇ ಹುಲಿಗಣತಿ ಅಂದರೆ 2018ರ ಹುಲಿಗಣತಿ ವರದಿಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು. ಆ ವರದಿಯ ಪ್ರಕಾರ ಭಾರತದಲ್ಲಿ 2,967 ಹುಲಿಗಳಿವೆ. ಅಂದರೆ ವಿಶ್ವದ ಶೇ.75ರಷ್ಟು ಹುಲಿಗಳು ಭಾರತದ ಕಾಡುಗಳಲ್ಲಿವೆ. ಈ ಮೂಲಕ ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಗುರುತಿಸಿಕೊಂಡಿದೆ. ಅಲ್ಲಧೆ ಭಾರತದಲ್ಲಿ 2018ರಲ್ಲಿ ನಡೆಸಿದ ಹುಲಿಗಣತಿ 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ವಿಶ್ವದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪಿಂಗ್ ವನ್ಯಜೀವಿ ಸಮೀಕ್ಷೆ ಎಂದು ಸಂಘಟಕರು ಹೇಳಿದ್ದಾರೆ.