ಚಿಕ್ಕಮಗಳೂರು:ಜಿಲ್ಲೆಯ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಒಬ್ಬನೇ ಒಬ್ಬ ವೈದ್ಯನಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕಳಸ ಗುಡ್ಡಗಾಡು ಪ್ರದೇಶದ ಅತಿ ಹೆಚ್ಚು ಬಡವರು ಹಾಗೂ ಕೂಲಿ ಕಾರ್ಮಿಕರ ಹೊಂದಿರುವಂತಹ ತಾಲೂಕಾಗಿದೆ. ಕಳಸ ತಾಲೂಕು ಕೇಂದ್ರವಾಗಿ ಕೆಲವು ವರ್ಷಗಳೇ ಕಳೆಯುತ್ತಾ ಬಂದರೂ ಇಲ್ಲಿನ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಅತಿ ಹೆಚ್ಚು ಕೂಲಿ ಕಾರ್ಮಿಕರು, ತೋಟದಲ್ಲಿ ಕೆಲಸ ಮಾಡುವ ಬಡವರು ಈ ತಾಲೂಕು ಕೇಂದ್ರದಲ್ಲಿ ಹೆಚ್ಚಾಗಿ ವಾಸವಾಗಿದ್ದು, ತಾಲೂಕು ಕೇಂದ್ರದಲ್ಲಿ ಒಂದು ಸುಸಜ್ಜಿತವಾದ ತಾಲೂಕು ಆಸ್ಪತ್ರೆ ಇಲ್ಲ. ಸರ್ಕಾರಿ ಆಸ್ಪತ್ರೆ ಇದ್ದರೂ ಕೂಡ ಇಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರೇ ಇಲ್ಲ. ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ಸಮಸ್ಯೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಲ್ಲದೆ ಅದೆಷ್ಟೋ ಜನ ಜೀವ ಕಳೆದುಕೊಂಡ ಉದಾಹರಣೆಗಳು ಇವೆ. ಈಗ ಕಳಸ ಸರ್ಕಾರಿ ಆಸ್ಪತ್ರೆಗೆ ಒಟ್ಟು 39 ಜನ ಸಿಬ್ಬಂದಿ ಅವಶ್ಯಕತೆ ಇದೆ. ನಾಲ್ಕು ಜನ ಖಾಯಂ ವೈದ್ಯರ ಅಗತ್ಯತೆ ಇದೆ. ಆದರೆ ಇಲ್ಲಿ ಒಬ್ಬನೇ ಒಬ್ಬ ಖಾಯಂ ವೈದ್ಯನಿಲ್ಲ. ಇಲ್ಲಿ ಸರ್ಕಾರಿ ವೈದ್ಯರಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೂಡಿಗೆರೆ ತಾಲೂಕು ವೈದ್ಯಾಧಿಕಾರಿ ಸುಂದ್ರೇಶ್, ವೈದ್ಯರ ಕೊರತೆ ಬಗ್ಗೆ ಮಾಹಿತಿ ಇದೆ. ಮುಂದಿನ ನಾಲ್ಕು ದಿನದಲ್ಲಿ ತಾತ್ಕಾಲಿಕ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ.