ಚಿಕ್ಕಮಗಳೂರು: ದಟ್ಟ ಕಾಡಿನ ಮಧ್ಯೆ ಇರುವುದು ಒಂದೇ ಮನೆ. ಏನಾದರೂ ಅಗತ್ಯ ವಸ್ತುಗಳು ಬೇಕೆಂದರೆ ಸುಮಾರು 15 ಕಿ.ಮೀ ನಡೆದುಕೊಂಡು ಬರಬೇಕು. ಮನೆಯಲ್ಲಿ ವಿದ್ಯುತ್ ಸೇರಿದಂತೆ ಯಾವುದೇ ಮೂಲ ಸೌಕರ್ಯವಿಲ್ಲ. ಈ ರೀತಿ ಮೂಲ ಸೌಕರ್ಯದಿಂದ ವಂಚಿತರಾಗಿ ಕಳೆದು ನಾಲ್ಕು ದಶಕಗಳಿಂದ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಸಮೀಪದ ಅಬ್ಬಿ ಮಠದ ಕ್ಯಾತನಮಕ್ಕಿಯಲ್ಲಿ ಕುಟುಂಬವೊಂದು ಜೀವನ ನಡೆಸುತ್ತಿದೆ.
ಕ್ಯಾತನಮಕ್ಕಿಯ ದಟ್ಟಾರಣ್ಯದ ನಡುವೆ ಲಿಂಗಪ್ಪ ಅವರ ಕುಟುಂಬ ವಾಸವಾಗಿದೆ. ಲಿಂಗಪ್ಪ ಅವರ ಕುಟುಂಬ ಇಲ್ಲಿ ನೆಲೆಸಿದ್ದು, ಮೂಲ ಸೌಕರ್ಯಗಳು ಇವರಿಗೆ ಮರೀಚಿಕೆ. ಇವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಸುಮಾರು ಹದಿನೈದು ಕಿ.ಮೀ ದೂರ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಂತೂ ಕಷ್ಟ ಕೇಳುವುದೇ ಬೇಡ. ರಸ್ತೆ ಮಾರ್ಗ, ವಿದ್ಯುತ್ ಸಂಪರ್ಕ ಇಲ್ಲದೇ ದಿನವೂ ಪರದಾಡಬೇಕಿದೆ.
ದೂರದ ಮಿಲ್ಗೆ ಭತ್ತ ಸಾಗಿಸಲು ಕಷ್ಟವಾಗುವ ಕಾರಣ ಮನೆಯಲ್ಲಿಯೇ ಭತ್ತ ಕುಟ್ಟಿ ಅಕ್ಕಿ ತಯಾರು ಮಾಡುತ್ತಾರೆ. ತರಕಾರಿಯನ್ನು ಇವರೇ ಬೆಳೆಯುತ್ತಾರೆ. ವರ್ಷಕ್ಕಾಗುವಷ್ಟು ಸೌದೆ ತಯಾರು ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೆ ನಡೆದು ಕಳಸಕ್ಕೆ ಬರಬೇಕು.
ಮನೆಗೆ ತೆರಳಲು ಸರಿಯಾದ ರಸ್ತೆ ಇಲ್ಲ. ಮನೆಗೆ ಹೋಗಲು ಮೂರು ನಾಲ್ಕು ಹಳ್ಳಗಳನ್ನು ದಾಟಬೇಕು. ಕಾಲು ಸಂಕಗಳು ಮುರಿಯುವ ಹಂತ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಪ್ರದೇಶಕ್ಕೆ ಯಾವುದೇ ವಾಹನಗಳು ಹೋಗುವುದಿಲ್ಲ. ಜೀಪ್ಗಳು ಮಾತ್ರ ನಿಯಮಿತವಾಗಿ ಸಂಚಾರ ನಡೆಸುತ್ತವೆ. ಮಳೆಗಾಲದಲ್ಲಿ ವಾಹನ ಸಂಚಾರ ಬಂದ್ ಆಗುತ್ತದೆ.