ಚಿಕ್ಕಮಗಳೂರು: ಅಭಿವೃದ್ಧಿ ಹಾಗು ರಸ್ತೆ ಅಗಲೀಕರಣ ಹೆಸರಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಬದುಕಿಗೆ ಬೆಳಕಾಗಿ ಭವಿಷ್ಯಕ್ಕೆ ನೆರಳಾಗಿದ್ದ ಶತಮಾನದ ಮರಗಳನ್ನು ಮುಲಾಜಿಲ್ಲದೆ ಕ್ಷಣಾರ್ಧದಲ್ಲಿ ಕಡಿದು ನೆಲಕ್ಕುರುಳಿಸುತ್ತಿದ್ದಾರೆ.
ಈ ಮಧ್ಯೆ ಕಾಫಿನಾಡಲ್ಲಿ ನೂರಾರು ವರ್ಷಗಳ ಕಾಲ ಬದುಕಿ-ಬಾಳಿದ್ದ ಮರಗಳನ್ನು ಕಡಿದು ಹಾಕಿದರೂ ಅವುಗಳಿಗೆ ಮರುಜೀವ ಕೊಡುವ ಕೆಲಸ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಈ ರೀತಿ ಮರಕ್ಕೆ ಮರುಜೀವದ ಕಾರ್ಯ ನಡೆಯುತ್ತಿದ್ದು, ಪರಿಸರ ಪ್ರೇಮಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು, ಇದೇನಿದು ರಂಬೆ-ಕೊಂಬೆಗಳನ್ನ ಕಡಿದು ಹಾಕಿರೋ ಬೋಳು ಮರವನ್ನು ತೋರಿಸ್ತಿದ್ದಾರೆ, ಪಾರ್ಕ್ನ ಒಳಗೆ ಮರಗಳನ್ನು ಕಡಿದವರು ಯಾರು? ಅಂತ ಕನ್ಫ್ಯೂಸ್ ಆಗ್ಬೇಡಿ. ಈ ಮರಗಳನ್ನು ಪಾರ್ಕ್‍ನಲ್ಲಿ ಕಡಿದದ್ದಲ್ಲ. ಈ ಮರಗಳು ಪಾರ್ಕಿಗೆ ಬಂದಿರೋ ಅತಿಥಿಗಳು. ಚಿಕ್ಕಮಗಳೂರು ನಗರದ ಕಲ್ಯಾಣನಗರದ ಪಾರ್ಕ್‍ನಲ್ಲಿ ಈ ಮರಗಳನ್ನು ನೋಡಿ ಜನ ಅಚ್ಚರಿಗೊಂಡಿದ್ದಾರೆ.
ದಿನ ವಾಕ್ ಮಾಡ್ತೀವಿ. ಆವಾಗ ಮರ ಇರಲಿಲ್ಲ. ಈಗ ಎಲ್ಲಿಂದ ಬಂತು? ಅಂತ ಜನ ಗಾಬರಿಯಾಗಿದ್ದಾರೆ. ಅದು ಸಣ್ಣ-ಪುಟ್ಟ ಗಿಡವಲ್ಲ. ಶತಮಾನಗಳಷ್ಟು ಹಳೆಯ ಮರಗಳು ಹೇಗೆ ಬಂದ್ವು ಅಂತ ಜನ ಗಾಬರಿಯಾಗಿದ್ದಾರೆ. ಅಷ್ಟಕ್ಕೂ ಈ ಮರಗಳು ಇಲ್ಲಿ ಬೆಳೆದಿದ್ದಲ್ಲ. ನೂರಾರು ವರ್ಷಗಳಿಂದ ರಸ್ತೆ ಬದಿ ಇದ್ದ ಮರಗಳನ್ನ ರಸ್ತೆ ಅಗಲೀಕರಣಕ್ಕೆ ಕಡಿದ ಬಳಿಕ ತಂದು ಪಾರ್ಕ್‍ನಲ್ಲಿ ಮರುಜನ್ಮ ನೀಡಿದ್ದಾರೆ.
ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ರಸ್ತೆ ಅಗಲೀಕರಣದಲ್ಲಿ ಹತ್ತಾರು ಮರಗಳನ್ನ ಕಡಿದು ಹಾಕಿದ್ರು. ಆದರೆ, ಅಪರೂಪದ ಜಾತಿಯ ಮರಗಳನ್ನ ಉಳಿಸಬೇಕೆಂದು ನಗರಸಭೆ ಆಯುಕ್ತರು ತೀರ್ಮಾನಿಸಿ ಅವುಗಳನ್ನ ಮತ್ತೆ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೂರಾರು ವರ್ಷಗಳಿಂದ ಜನರಿಗೆ ನೆರಳಾಗಿದ್ದ ಮರಗಳನ್ನ ಬುಡಸಮೇತ ತೆಗೆದು ಪಾರ್ಕ್‍ನಲ್ಲಿ ಮರುಜನ್ಮ ನೀಡಿ ಬೆಳೆಸಲು ಮುಂದಾಗಿದ್ದಾರೆ.