ಚಿಕ್ಕಮಗಳೂರು:"ಹೂವು ಚೆಲುವೆಲ್ಲ ನಂದೆಂದಿತು" ಅನ್ನೋ ಮಾತು ಅಕ್ಷರಶಃ ಸತ್ಯ. ಜಗತ್ತಿನ ಸೌಂದರ್ಯವನ್ನೆಲ್ಲ ತನ್ನಲ್ಲೇ ಹುದುಗಿಸಿಕೊಂಡಿರುವ ಪ್ರಕೃತಿಯ ಸಿರಿತನದೆದುರ ಉಳಿದದ್ದೆಲ್ಲ ನಶ್ವರವೇ ಸರಿ. ಕಾಫಿನಾಡಲ್ಲಿ ಅರಳಿ ನಿಂತಿರುವ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆ ಇಮ್ಮಡಿಗೊಳಿಸಿದೆ.
12 ವರ್ಷಗಳಿಗೊಮ್ಮೆ ಅರಳುವ ಈ ಹೂ ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲ ಕಾಣುವ ಅಪರೂಪದ ಕುರಂಜಿ ನೋಡುಗರ ಕಣ್ಮನ ಸೆಳೆಯುವುದರ ಜೊತೆಗೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಪಂಡರವಳ್ಳಿ , ಏಳುನೂರು ಖಾನ್ ಎಸ್ಟೇಟ್ ಸಮೀಪ 12 ವರ್ಷಕ್ಕೊಮ್ಮೆ ಅರಳಿವ ಹೂ ಎಂದೇ ಹೆಸರುವಾಸಿಯಾದ ನೀಲಿ ಕುರಂಜಿ ಹೂ ಅರಳಿ ನಿಂತಿದೆ. ಈ ಹೂವನ್ನು ಗುರ್ಗಿ ಎಂತಾಲು ಕರೆಯುತ್ತಾರೆ. 12 ವರ್ಷಗಳಿಗೊಮ್ಮೆ ಅರಳುವ ಈ ಹೂವು ತಿಂಗಳುಗಳ ಕಾಲ ತನ್ನ ಸೌಂದರ್ಯವನ್ನ ಹೊರ ಚೆಲ್ಲುತ್ತಾ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸೌಂದರ್ಯಕ್ಕೆ ಸಾಕ್ಷಿಯಾಗಿರುತ್ತದೆ.
ಗಿರಿ ಶ್ರೇಣಿಯಲ್ಲಿ ರಾರಾಜಿಸುತ್ತಿರುವ ಕುರಂಜಿ:ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಫಿನಾಡಿನ ಗಿರಿ - ಪರ್ವತ ಶ್ರೇಣಿಗಳು ನೀಲಿ ರೂಪ ಪಡೆದುಕೊಳ್ಳುತ್ತಿವೆ. ಬೆಟ್ಟ-ಗುಡ್ಡಗಳೆಲ್ಲ ನೀಲಿಯಾಗಿ ಕಂಗೊಳಿಸುತ್ತಿವೆ. ಮುಳ್ಳಯ್ಯನಗಿರಿ ಶ್ರೇಣಿಯ ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರುವ ಈ ಕುರಂಜಿ ಪ್ರವಾಸಿಗರನ್ನ ಸ್ವಾಗತಿಸುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಅರಳುವ ಈ ಹೂ ಕಾಫಿನಾಡಿನ ಚಂದ್ರದ್ರೋಣ ಪರ್ವತ, ದೇವರಮನೆ ಬೆಟ್ಟ ಹಾಗೂ ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಅರಳಿ ನಿಂತಿವೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರುವುದರಿಂದ ಈ ಹೂವು ಇನ್ನೂ ಜೀವಂತವಾಗಿದೆ.