ಚಿಕ್ಕಮಗಳೂರು: ನಕ್ಸಲ್ ನಾಯಕ ಸಾಕೇತ್ ರಾಜನ್ ಮೃತಪಟ್ಟು ಇಂದಿಗೆ 15 ವರ್ಷಗಳೇ ಕಳೆದಿದೆ. ಆದರೆ ಈ ಭಾಗದಲ್ಲಿ ಇನ್ನೂ ರಸ್ತೆ, ವಿದ್ಯುತ್,ನೀರು ಸರಿಯಾದ ಪ್ರಮಾಣದಲ್ಲಿ ಜನರಿಗೆ ಸಿಗುತ್ತಿಲ್ಲ. ಎಷ್ಟೋ ಕುಟುಂಬಗಳು ವಾಸ್ತವ್ಯದ ಹಕ್ಕು ಪತ್ರ ಸಿಗದೇ ಅತಂತ್ರರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಮೆಣಸಿನ ಹಾಡ್ಯದ ವಿಷ್ನೇಶ್ವರ ಕಟ್ಟೆ ಎಂಬಲ್ಲಿ 2005 ಫೆ. 5 ರ ನಡುರಾತ್ರಿ ಎಎನ್ಎಫ್(ನಕ್ಸಲ್ ನಿಗ್ರಹ ದಳ) ಪೋಲಿಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಹಾಗೂ ಶಿವಲಿಂಗೂ ಹತರಾಗಿದ್ದರು. ಸಾಕೇತ್ ಮೃತಪಟ್ಟ ಕಲ್ಲು ಬಂಡೆ ಮೇಲೆ ನಕ್ಸಲರು ಸ್ಮಾರಕವೊಂದನ್ನು ನಿರ್ಮಿಸಿದ್ದರು. ನಂತರ ಮಲೆನಾಡಿನಲ್ಲಿ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ನಕ್ಸಲ್ ಚಟುವಟಿಕೆಗಳು ನಡೆಯುತ್ತಲೇ ಬಂದಿದೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಐದು ಕೂಂಬಿಂಗ್ ತಂಡಗಳು ಕಾರ್ಯಾಚರಣೆ ಮಾಡುತ್ತಿದ್ದು, ಒಂದೊಂದು ತಂಡದಲ್ಲಿ 15 ರಿಂದ 20 ಎ ಎನ್ ಎಫ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ನಕ್ಸಲ್‌ಪೀಡಿತ ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡುತ್ತಿದ್ದರೂ ನಿರೀಕ್ಷಿತ ಸಾಧನೆಯಾಗದೇ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಸಾಕಷ್ಟು ಜನರಿಗೆ ಮೂಲಭೂತ ಸೌಕರ್ಯ ದೊರೆತಿಲ್ಲ.
ಇದರಿಂದ ಗ್ರಾಮೀಣ ಜನರಿಗೆ ಸರಿಯಾದ ಸೌಲಭ್ಯ ಸಿಗದೇ ಅವರ ಕನಸು ಗಗನ ಕುಸುಮವಾಗಿಯೇ ಉಳಿದಿದೆ. ಬಲಿಗೆ, ಮಾವಿನ ಹೊಲ, ಕಾರ್ಲೇ, ನೆಲ್ಲಿಕೋಟ, ನಾಗಸಂಪಿಗೆ, ಮಕ್ಕಿ, ಭದ್ರಕಾಳಿ, ಮುಂತಾದ ಕಡೆಯ ಗ್ರಾಮಗಳಲ್ಲಿ ಇನ್ನು ಸಾಕಷ್ಟು ಅಭಿವೃದ್ದಿಯ ಕೆಲಸ ಕಾರ್ಯಗಳು ನಡೆಯಬೇಕಿದೆ.ಈ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಗರಿಗೆದರಿದಾಗ ಎಚ್ಚೆತ್ತುಕೊಳ್ಳುವ ಸರ್ಕಾರ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಿ ಇಲ್ಲಿ ವಾಸಿಸುವ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.