ಚಿಕ್ಕಮಗಳೂರು :ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯ, ಹತ್ಯೆ, ವಲಸೆಯನ್ನು ಎಳೆ ಎಳೆಯಾಗಿ ತೆರೆದಿಟ್ಟಿರುವ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಅನೇಕ ಕಾರಣಗಳಿಂದಾಗಿ ಭಾರಿ ಸದ್ದು ಮಾಡುತ್ತಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಹೊಸ ಹವಾ ಸೃಷ್ಟಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತಾದ ಎಳೆಯನ್ನ ಹೊಂದಿರುವ ಈ ಚಿತ್ರ ಇದೀಗ ರಾಜಕೀಯ ಚರ್ಚೆಗೂ ಎಡೆ ಮಾಡಿಕೊಟ್ಟಿದೆ. ಒಂದೆಡೆ ಹೇಗಾದ್ರೂ ಮಾಡಿ ಎಲ್ಲರಿಗೂ ಈ ಚಿತ್ರವನ್ನ ತೋರಿಸಬೇಕು ಅಂತಾ ಬಿಜೆಪಿ ಉತ್ಸುಕತೆ ತೋರುತ್ತಿದ್ರೆ, ಈ ಸಿನಿಮಾದಿಂದ ತನಗೆ ಮೈನಸ್ ಆಗಬಹುದು ಅಂತಾ ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿದೆ. ಅಷ್ಟೇ ಅಲ್ಲ, ಹಿಂದಿ ಭಾಷೆಯಲ್ಲಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡುವ ಪ್ರಯತ್ನಗಳು ಕೂಡ ನಡೀತಿವೆ.
ಈ ಮಧ್ಯೆದಲ್ಲೇ ಚಿಕ್ಕಮಗಳೂರು ನಗರಸಭೆಯಲ್ಲೊಂದು ಎಡವಟ್ಟು ನಡೆದು ಹೋಗಿದೆ. ಸಿನಿಮಾವನ್ನ ವೀಕ್ಷಿಸಲು ಕರ್ತವ್ಯಕ್ಕೆ ಚಕ್ಕರ್ ಹಾಕಿ ಎಲ್ಲ ಸಿಬ್ಬಂದಿ ಥಿಯೇಟರ್‌ಗೆ ಹಾಜರ್ ಆಗಿರುವ ಘಟನೆ ಇಂದು ನಡೆದಿದೆ. ಸಿನಿಮಾ ವೀಕ್ಷಣೆಗೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಯನ್ನ ಆಹ್ವಾನಿಸಿದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ನಿನ್ನೆಯೇ ಎಲ್ಲರಿಗೂ ವಾಟ್ಸ್‌ಆ್ಯಪ್ ಮೆಸೇಜ್ ಮಾಡಿದ್ದರಂತೆ.