ಚಿಕ್ಕಮಗಳೂರು: ಇಲ್ಲಿನ ನಗರಸಭೆಯ ಓರ್ವ ಸಿಬ್ಬಂದಿ ಮತ್ತು ಬ್ರೋಕರ್ ಸೇರಿ ನಗರಸಭೆಗೆ ಸೇರಬೇಕಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ನಗರಸಭೆಯ ನೀರು, ಕಂದಾಯ ಮುಂತಾದ ಬಿಲ್ಗಳನ್ನು ಕಟ್ಟುವುದಾಗಿ ಜನರಿಂದ ಪಡೆದ ಹಣವನ್ನು ನಗರಸಭೆಗೆ ಜಮೆ ಮಾಡದೆ ವಂಚನೆ ಮಾಡಲಾಗಿದೆ ಎನ್ನಲಾಗಿದೆ. ಜನರಿಂದ ಬಿಲ್ ಹಾಗೂ ಹಣ ಪಡೆದು ಅವರಿಗೆ ಬ್ಯಾಂಕ್ ಸೀಲ್ ಇರುವ ರಶೀದಿಗಳನ್ನು ನಗರಸಭೆಯ ಓರ್ವ ಸಿಬ್ಬಂದಿ ನೀಡುತ್ತಿದ್ದರು. ಆದರೆ ಹಣ ಮಾತ್ರ ನಗರಸಭೆ ಅಕೌಂಟಿಗೆ ಜಮೆಯಾಗುತ್ತಿರಲಿಲ್ಲ. ಸಿಬ್ಬಂದಿಯ ಈ ಅಕ್ರಮಕ್ಕೆ ಬ್ರೋಕರ್ ಒಬ್ಬರು ಸಹ ಜೊತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕಿನಲ್ಲಿ ನಗರಸಭೆಗೆ ಸಂಬಂಧಿಸಿದ ಚಲನ್ಗಳು ತಾಳೆಯಾಗದಿದ್ದಾಗ ಬ್ಯಾಂಕ್ ಸಿಬ್ಬಂದಿಯು ನಗರಸಭೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಪ್ರಕರಣದ ಹಿನ್ನೆಲೆ ಪರಿಶೀಲಿಸಿದಾಗ ಹಣದ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ನಗರಸಭೆ ಅಧಿಕಾರಿಗಳು ಈಗ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.