ಕರ್ನಾಟಕ

karnataka

ETV Bharat / state

'ನಾನು ದಲಿತ ಎಂದು ಹೀಗೆಲ್ಲ ಮಾಡುತ್ತಿದ್ದಾರೆ..': ಶಾಸಕ ಎಂ.ಪಿ.ಕುಮಾರಸ್ವಾಮಿ ಕಣ್ಣೀರು - ಈಟಿವಿ ಭಾರತ ಕನ್ನಡ

ವಿಜಯ ಸಂಕಲ್ಪ ಯಾತ್ರೆಯಲ್ಲಿ ನಡೆದ ಘಟನೆ ನೆನೆದು ಶಾಸಕ ಎಂ.ಪಿ.ಕುಮಾರಸ್ವಾಮಿ ಕಣ್ಣೀರಿಟ್ಟರು.

ಎಂ ಪಿ ಕುಮಾರಸ್ವಾಮಿ
ಎಂ ಪಿ ಕುಮಾರಸ್ವಾಮಿ

By

Published : Mar 17, 2023, 9:10 AM IST

Updated : Mar 17, 2023, 11:19 AM IST

ಶಾಸಕ ಎಂ.ಪಿ.ಕುಮಾರಸ್ವಾಮಿ ಕಣ್ಣೀರು

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಗುರುವಾರ ನಡೆದ ಘಟನೆಯ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಶಾಸಕ ಎಂ.ಪಿ.ಕುಮಾರಸ್ವಾಮಿ ಕಣ್ಣೀರು ಸುರಿಸಿದರು. "ನಾನು‌ ದಲಿತ ಎಂದು ಹೀಗೆಲ್ಲ ಮಾಡುತ್ತಿದ್ದಾರೆ. ಬೇರೆ ಜನರಲ್ ಶಾಸಕ ಆಗಿದ್ದರೆ ಹೀಗೆ ಮಾಡುತ್ತಿದ್ದರಾ?" ಎಂದು ಬೇಸರ ವ್ಯಕ್ತಪಡಿಸಿದರು. ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ಗುರುವಾರ ಬಿ.ಎಸ್.ಯಡಿಯೂರಪ್ಪ ಚಿಕ್ಕಮಗಳೂರಿಗೆ ಆಗಮಿಸುವ ಮಾರ್ಗ ಮಧ್ಯೆ ಪಕ್ಷದ ಕಾರ್ಯಕರ್ತರು ರಸ್ತೆ ತಡೆದು, ಈ ಬಾರಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬದಲಿಗೆ ಬೇರೆಯವರಿಗೆ ವಿಧಾನಸಭೆ ಚುನಾವಣೆ ಟಿಕೆಟ್​ ನೀಡುವಂತೆ ಘೋಷಣೆ ಕೂಗಿದ್ದರು. ಈ ಬಗ್ಗೆ ಮಾತನಾಡುತ್ತಾ ಶಾಸಕ ನೋವು ತೋಡಿಕೊಂಡರು.

"ಕೆಲವರು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ. ಅವರು 2000 ಇಸವಿಯಿಂದಲೂ ಇದ್ದವರೇ. 2013ರಲ್ಲಿ ನಾನು ಸ್ವಲ್ಪ ಮೈಮರೆತೆ. ಹೀಗಾಗಿ 1000 ಮತಗಳಿಂದ ಸೋತೆ. ಆಗ ಇದ್ದವರೂ ಇವರೇ. ಮಹಾನ್​ ನಾಯಕರಾದ ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸಿದಾಗ ಈ ರೀತಿ ಮಾಡಿದ್ದು, ಅವರಿಗೆ ಜನರ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವ ಮಾತೇ ಇಲ್ಲ. ವಿರಮಿಸದೇ ಓಡಾಟ ಮಾಡಿ ಪಕ್ಷಕ್ಕಾಗಿ ದುಡಿಯುತ್ತೇನೆ. ಯಡಿಯೂರಪ್ಪ ಅವರು ಪಕ್ಷಕ್ಕಾಗಿ ನಿರಂತರ ಕೆಲಸ ಮಾಡುವಂತೆ ಹೇಳಿದ್ದಾರೆ, ಅದನ್ನು ಮಾಡಿಯೇ ತೀರುವೆ. ಈಗಾಗಲೇ ಎಲ್ಲಾ ಸರ್ವೇಗಳಲ್ಲೂ ಮೂಡಿಗೆರೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ" ಎಂದರು.

"ಒಂದಿಷ್ಟು ಜನ ಬೇಕಂತಲೇ ಪಕ್ಷ ಮತ್ತು ಕಾರ್ಯಕ್ರಮಕ್ಕೆ ಅವಮಾನವಾಗಲೆಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದಾರೆ. ಘಟನೆಯ ಬಗ್ಗೆ ಯಡಿಯೂರಪ್ಪ ಮತ್ತು ಸದಾನಂದ ಗೌಡರಿಗೆ ಬಹಳ ಬೇಸರ ಉಂಟಾಗಿದೆ. ಇದಾದ ನಂತರ ಯಡಿಯೂರಪ್ಪ ನನ್ನನ್ನು 100 ಮೀಟರ್ ದೂರಕ್ಕೆ ಕರೆದೊಯ್ದು ಸಮಾಧಾನ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮೂಡಿಗೆರೆಗೆ ನೀನೇ ಅಭ್ಯರ್ಥಿ, ಗೆಲ್ಲೋದು ನೀನೇ ಎಂದಿದ್ದಾರೆ. ಕೊನೆವರೆಗೂ ಪಕ್ಷಕ್ಕಾಗಿ ಹೋರಾಡುತ್ತೇನೆ. ನಾನು ಪಕ್ಷ ಮತ್ತು ಕಾರ್ಯಕರ್ತರನ್ನು ಬೆಳೆಸಲು ಹಾಗು ಅಧಿಕಾರಕ್ಕೆ ತರಲು ಶ್ರಮಿಸಿದ್ದೇನೆ. ನನಗೆ ಹೆಂಡ್ತಿ, ಮಕ್ಕಳು ಇಲ್ಲ, ನಾನು ಏಕಾಂಗಿ. ನನ್ನ ನಿಸ್ವಾರ್ಥ ಸೇವೆಯನ್ನು ಮೂಡಿಗೆರೆ ಜನ ಮೆಚ್ಚಿದ್ದಾರೆ" ಎಂದರು.

ಇದನ್ನೂ ಓದಿ:ಭಾರತದ ರೈತರಿಗೆ ವಿಶೇಷ ಗೌರವ,ಪ್ರತಿಯೊಬ್ಬರು ಮಾತೃಭೂಮಿಗೆ ನಮಿಸಬೇಕು: ಸ್ಮೃತಿ ಇರಾನಿ

ದೇಶದಲ್ಲಿ ಕಾಂಗ್ರೆಸಿಗರು ವಿನಾಶದ ಕೆಲಸ ಮಾಡುತ್ತಿದ್ದಾರೆ: ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌

Last Updated : Mar 17, 2023, 11:19 AM IST

ABOUT THE AUTHOR

...view details