ಚಿಕ್ಕಮಗಳೂರು: ದತ್ತ ಜಯಂತಿ ಉತ್ಸವದ ಕೊನೆಯ ದಿನವಾದ ಇಂದು ಸಾವಿರಾರು ಭಕ್ತರು ದತ್ತ ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದರು. ಶಾಸಕ ಸಿ ಟಿ ರವಿ ಅವರು ಇಲ್ಲಿನ ಹೊನ್ನಮ್ಮನ ಹಳ್ಳದಿಂದ ದತ್ತ ಪೀಠದವರೆಗೂ ತಲೆಯ ಮೇಲೆ ಇರುಮುಡಿ ಹೊತ್ತು ರಸ್ತೆಯುದ್ಧಕ್ಕೂ ದತ್ತಾತ್ರೇಯನ ಜಪ ಮಾಡುತ್ತಾ ಕಾಲ್ನಡಿಗೆಯಲ್ಲಿ ಸಾಗಿದರು.
ಸುಮಾರು 8 ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಿದ ಸಿ ಟಿ ರವಿಗೆ ತರೀಕೆರೆ ಶಾಸಕ ಡಿ ಎಸ್ ಸುರೇಶ್ ಮತ್ತು ಹಲವು ಭಕ್ತರು ಸಾಥ್ ಕೊಟ್ಟರು. ಬಳಿಕ ದತ್ತಪೀಠದಲ್ಲಿ ಪಾದುಕೆ ದರ್ಶನ ಪಡೆದು, ದತ್ತ ಹೋಮ ಗಣ ಹೋಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಇದ್ದರು.
ದತ್ತಪೀಠಕ್ಕೆ ಕಾಲ್ನಡಿಗೆ ಮೂಲಕ ಸಾಗಿದ ಶಾಸಕ ಸಿ ಟಿ ರವಿ ಕಳೆದ 11 ದಿನಗಳಿಂದ ನಡೆಯುತ್ತಿರುವ ಉತ್ಸವವು ಇಂದು ಸಂಪನ್ನಗೊಂಡಿದೆ. ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಿ ಮಾಲೆ ವಿಸರ್ಜಿಸಿ ದತ್ತ ಪಾದುಕೆಯ ದರ್ಶನ ಪಡೆದರ. ದಶಕಗಳ ಹೋರಾಟದ ಫಲವಾಗಿ ದತ್ತ ಪೀಠದ ತುಳಸಿ ಕಟ್ಟೆಯ ಬಳಿ ಗಣ ಹೋಮ, ದತ್ತ ಹೋಮ ನಡೆಯಿತು. ಪ್ರತಿ ಬಾರಿ ತಾತ್ಕಾಲಿಕ ಶೆಡ್‌ನಲ್ಲಿ ಧಾರ್ಮಿಕ ವಿಧಿ ನಡೆಯುತ್ತಿತ್ತು. ದತ್ತ ಪೀಠದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದನ್ನೂ ಓದಿ:ದತ್ತ ಜಯಂತಿ ಶೋಭಾ ಯಾತ್ರೆ.. ಕೇಸರಿಮಯವಾದ ಕಾಫಿನಾಡು, ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಅದ್ಭುತ ಕ್ಷಣಗಳು