ಚಿಕ್ಕಮಗಳೂರು: ವಿಧಾನ ಪರಿಷತ್ ನೂತನ ಉಪಸಭಾಪತಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಎಂ ಕೆ ಪ್ರಾಣೇಶ್ಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.
ಎಂ.ಕೆ ಪ್ರಾಣೇಶ್ಗೆ ಚಿಕ್ಕಮಗಳೂರಿನಲ್ಲಿ ಸನ್ಮಾನ ಜಿಲ್ಲೆಯ ಜೆಡಿಎಸ್ ಮುಖಂಡ, ಉಪ ಸಭಾಪತಿಯಾಗಿದ್ದ ಎಸ್.ಎಲ್ ಧರ್ಮೇಗೌಡ ಸಾವಿನ ನಂತರ ಪರಿಷತ್ ಉಪ ಸಭಾಪತಿ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ನೂತನವಾಗಿ ಬಿಜೆಪಿ ಮುಖಂಡ, ಎಂಎಲ್‌ಸಿ ಪ್ರಾಣೇಶ್ ಆಯ್ಕೆಯಾಗಿದ್ದಾರೆ.
ಈಗ ಮತ್ತೆ ಜಿಲ್ಲೆಯ ಎಂಎಲ್ಸಿಗೆ ಉಪ ಸಭಾಪತಿ ಸ್ಥಾನ ದೊರಕಿದೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದವರಾದ ಎಂ ಕೆ ಪ್ರಾಣೇಶ್ ನವೆಂಬರ್ 28, 1961ರಲ್ಲಿ ಎಂ ಯು ಕಾಳೇಗೌಡ ಮತ್ತು ರತ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಬಿಎವರೆಗೆ ಪದವಿ ವ್ಯಾಸಂಗ ಮಾಡಿದ್ದಾರೆ.
2000 ರಿಂದ 2005ರವರೆಗೆ ಚಿಕ್ಕಮಗಳೂರು ಜಿಪಂ ಸದಸ್ಯರಾಗಿದ್ದ ಪ್ರಾಣೇಶ್ 1989 ರಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದಾರೆ. 1991 ರಿಂದ 1998ರವರೆಗೆ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾಗಿ, 1998 ರಿಂದ 2001ರವರೆಗೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು.
2004 ರಿಂದ 2007ರವರೆಗೆ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯರಾಗಿ, 2001 ರಿಂದ 2004 ಮತ್ತು 2007ರಿಂದ 2011ರವರೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2010 ರಿಂದ 2013ರ ವರೆಗೆ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷರಾಗಿದ್ದರು.