ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿ ಝರಿ ಬಳಿ ಟ್ರೆಕ್ಕಿಂಗ್ಗೆ ಬಂದಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರು ಮೂಲದ ಭರತ್ (30) ಮೃತ ಯುವಕ. ರಾಣಿಝರಿ ಬಳಿಯ ಬೆಟ್ಟವೊಂದರಿಂದ ಸುಮಾರು ಮೂರು ಸಾವಿರ ಅಡಿ ಆಳದ ಕಂದಕದಲ್ಲಿ ಮೃತದೇಹ ಸಿಕ್ಕಿದೆ. ಡಿ. 6 ರಂದು ಬೆಂಗಳೂರಿನಿಂದ ದುರ್ಗದಹಳ್ಳಿ ಸಮೀಪದ ರಾಣಿಝರಿಗೆ ಟ್ರೆಕ್ಕಿಂಗ್ಗೆ ಬಂದಿದ್ದ ಯುವಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ನಾಟ್ ರೀಚಬಲ್ ಆಗಿತ್ತು. ರಾಣಿ ಝರಿ ಬಳಿ ಯುವಕನ ಬೈಕ್ ಪತ್ತೆಯಾಗಿತ್ತು.
ಬೈಕ್ ಬಳಿ ಮೊಬೈಲ್, ಟೀ ಶರ್ಟ್ ಹಾಗೂ ಚಪ್ಪಲಿ ಸಿಕ್ಕಿದ್ದವು. ಬೈಕ್ಗೆ ಐಡಿ ಕಾರ್ಡ್ ಮತ್ತು ಬ್ಯಾಗ್ ಸಿಕ್ಕಿಸಿ ಯುವಕ ನಾಪತ್ತೆ ಆಗಿದ್ದ. ಶುಕ್ರವಾರ ಬೆಂಗಳೂರಿನಿಂದ ಅವರ ಕುಟುಂಬದವರು ಆಗಮಿಸಿದ್ದರು. ಬಾಳೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿ ಶನಿವಾರ ಬೆಳಗ್ಗೆಯಿಂದ ಯುವಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ, ಬಣಕಲ್ ಸಮಾಜ ಸೇವಕ ಆರೀಫ್ ಮತ್ತು ಅವರ ಸ್ನೇಹಿತರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಏಳೆಂಟು ಡ್ರೋಣ್ ಕ್ಯಾಮರಾಗಳನ್ನು ಸಹ ಬಳಸಿ ಶೋಧ ಕಾರ್ಯ ನಡೆಸಲಾಗಿತ್ತು.