ಚಿಕ್ಕಮಗಳೂರು: ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದ ಪ್ರಕರಣ ಮಾಸುವ ಮುನ್ನವೇ, ನಿನ್ನೆ ರಾತ್ರಿ ಶೃಂಗೇರಿಯಲ್ಲಿ ಕೆಲ ಕಿಡಿಗೇಡಿಗಳು ಕೋಮು ಸಾಮರಸ್ಯ ಕದಡುವ ಕೃತ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಎಸ್ಡಿಪಿಐ ಕಾರ್ಯಕರ್ತರು ಹಾಗೂ ಕಾಂಗ್ರೆಸ್ನ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ರಫೀಕ್ ಅವರ ನಾಯಕತ್ವದಲ್ಲಿ, ಶಂಕರಚಾರ್ಯರ ಪುತ್ಥಳಿಯ ಮೇಲೆ ಎಸ್ಡಿಪಿಐ ಬಾವುಟ ನೆಟ್ಟಿದ್ದಾರೆ ಎಂದು ಶೃಂಗೇರಿಯ ಮಾಜಿ ಶಾಸಕ ಡಿ.ಎನ್. ಜೀವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಶಾಸಕ ಡಿ.ಎನ್. ಜೀವರಾಜ್ ಈ ಕುರಿತು ಪ್ರತಿಭಟನೆ ಮಾಡಲಾಗಿದ್ದು, ಈ ವ್ಯಕ್ತಿಗಳನ್ನು ಬಂಧಿಸಬೇಕು ಹಾಗೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಪೋಲಿಸರಿಗೆ ಆಗ್ರಹಿಸಿದ್ದೆವು. ಪೋಲಿಸರು ಕೂಡಲೇ ಆ ವ್ಯಕ್ತಿಯನ್ನು ಬಂಧಿಸಿದ್ದು, ಇವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.
ದೇಶದ್ರೋಹದ ಚಟುವಟಿಕೆ ನಡೆಸುವ ಎಸ್ಡಿಪಿಐ ಅವರ ಜೊತೆ ಕೈ ಜೋಡಿಸಿರುವ ರಫೀಕ್ ಅವರ ಪಟ್ಟಣ ಪಂಚಾಯತ್ ಸದಸ್ಯತ್ವ ರದ್ದು ಮಾಡಬೇಕು. ಅವರಿಗೆ ತಕ್ಕ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.