ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಅತಿವೃಷ್ಟಿಯಿಂದ ಸಾವನ್ನಪ್ಪಿದ ಶಂಕರ್ (38) ಎಂಬುವವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರದ ವತಿಯಿಂದ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದರು.
ಪರಿಹಾರದ ಚೆಕ್ ವಿತರಣೆ ಮಾಡಿದ ಸಚಿವ ಸಿ.ಟಿ.ರವಿ ನಿರಂತರ ಧಾರಾಕಾರ ಮಳೆ ಮಲೆನಾಡು ಭಾಗದಲ್ಲಿ ಬಂದಂತಹ ಸಂದರ್ಭದಲ್ಲಿ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಅಂಡವಾನೆ ಗ್ರಾಮ ಶಂಕರ್ (38) ಅತಿವೃಷ್ಟಿಗೆ ಸಿಲುಕಿ ಸಾವನ್ನಪ್ಪಿದ್ದರು. ಈ ಗ್ರಾಮದ ಸುತ್ತಲೂ ಅತಿವೃಷ್ಟಿ ಬಂದ ಸಂದರ್ಭದಲ್ಲಿ ಶಂಕರ್ ಗದ್ದೆಗೆ ಹೋಗಿ ಮನೆಗೆ ಬರುವ ವೇಳೆ ನೆರೆಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂಬ ವರದಿ ಬಂದ ಹಿನ್ನೆಲೆ ಆ ವರದಿಯನ್ನು ಆಧರಿಸಿ ಪ್ರಕೃತಿ ವಿಕೋಪದ ಪರಿಹಾರದ ಅಡಿಯಲ್ಲಿ 5 ಲಕ್ಷ ರೂಪಾಯಿ ಪರಿಹಾರದ ಹಣದ ಚೆಕ್ಅನ್ನು ಅವರ ಕುಟುಂಬದವರಿಗೆ ನೀಡಿದ್ದೇವೆ.
ಸರ್ಕಾರ ಸಾವನ್ನಪ್ಪಿದವರನ್ನು ವಾಪಸ್ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬದ ನೆರವಿಗೆ ಬರುವುದು ಮಾನವೀಯ ಕರ್ತವ್ಯ. ಈ ಹಿನ್ನೆಲೆ ಈ ಕೆಲಸವನ್ನು ಮಾಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈವರೆಗೂ ಪ್ರಕೃತಿ ವಿಕೋಪದಿಂದ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂಬ ವರದಿಯಿದೆ. ಅದರಲ್ಲಿ ಇನ್ನೂ ಇಬ್ಬರದು ಶವ ಪರೀಕ್ಷೆಯ ವರದಿ ಬರಬೇಕಿದೆ. ಶವ ಪರೀಕ್ಷೆಯ ವರದಿ ಬಂದ ಕೂಡಲೇ ನಾಲ್ಕು ಜನರಿಗೂ ಪರಿಹಾರದ ಹಣವನ್ನು ಅವರ ಕುಟುಂಬಕ್ಕೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.