ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಳೆ, ರಸ್ತೆ, ಮನೆ ಹಾನಿಯಾದ ಪ್ರದೇಶಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನೀರಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಶಂಕರ್ ಎಂಬುವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಚಿವ ಸಿ.ಟಿ.ರವಿ ಅವರು ಸಾಂತ್ವನ ಹೇಳಿದರು. ಶಂಕರ್ ಪತ್ನಿ ಮಮತಾಗೆ ₹5 ಲಕ್ಷದ ಪರಿಹಾರದ ಚೆಕ್ ವಿತರಿಸಿ, ನಂತರ ಕೊಪ್ಪ ತಾಲೂಕಿನ ಜಲದುರ್ಗ ಹಾಗೂ ಶುಂಠಿಗದ್ದೆ ಗ್ರಾಮಕ್ಕೆ ಭೇಟಿದರು.
ಇದೇ ವೇಳೆ ಮಾತಾನಾಡಿದ ಅವರು, ಮೃತಪಟ್ಟವರನ್ನು ವಾಪಾಸ್ ತರಲು ಸರ್ಕಾರಕ್ಕೆ ಸಾಧ್ಯವಿಲ್ಲ. ಕುಟುಂಬದ ನರೆವಿಗೆ ಬರುವುದು ಸರ್ಕಾರದ ಮಾನವೀಯ ಕರ್ತವ್ಯ ಎಂಬ ನೆಲೆಯಲ್ಲಿ ಅವರಿಗೆ ಪರಿಹಾರ ನೀಡಿದ್ದೇವೆ ಎಂದರು.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಿ.ಟಿ.ರವಿ ಜಿಲ್ಲೆಯಲ್ಲಿ ಹಾನಿಯ ಸಮೀಕ್ಷೆ ನಡೆಯುತ್ತಿದ್ದು, ಹಾನಿ ಪಟ್ಟಿ ಬಂದ ತಕ್ಷಣ ಎನ್ಡಿಆರ್ಎಫ್ ಮಾರ್ಗದರ್ಶಿ ಸೂಚನೆ ಅನ್ವಯ ಹಣ ಬಿಡುಗಡೆಯಾಗುತ್ತದೆ. ಹೆಚ್ಚುವರಿ ಹಣ ಬಿಡುಗಡೆಗೆ ಸಿಎಂ ಜೊತೆ ಮಾತಾನಾಡುತ್ತೇನೆ ಎಂದು ಹೇಳಿದರು.