ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹೊರಳೆ, ಮೆಣಸಿನ ಕುಡಿಗೆ, ಕಿತ್ತಲೆ ಗೂಳಿ ಅಮ್ಮಡ್ಲು ಸೇರಿದಂತೆ ಹಲವಾರು ಗ್ರಾಮಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ, ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಸಚಿವ ಸುರೇಶ್ ಕುಮಾರ್ ಹೇಳಿಕೆ ನಂತರ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು, ಕಳೆದ ಮೂರು ದಿನಗಳ ಹಿಂದೆ ಹೊರಳೆ ಗ್ರಾಮದ ಆದರ್ಶ ಎಂಬ ವಿದ್ಯಾರ್ಥಿ ಮಾತನಾಡಿದ ಒಂದು ಆಡಿಯೋ ಸಂದೇಶ ನನಗೆ ಸಿಕ್ಕಿತ್ತು. ಈ ವರ್ಷ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆದರ್ಶ್ ತನ್ನ ಅಳಲನ್ನು ಆಡಿಯೋದಲ್ಲಿ ತೋಡಿಕೊಂಡಿದ್ದರು. ಆತ ಶೃಂಗೇರಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈಗ ಶಾಲೆ ಮತ್ತು ಹಾಸ್ಟೆಲ್ ಬಂದಾಗಿದ್ದು, ತುಂಬಾ ಸಮಸ್ಯೆಯು ಉಂಟಾಗುತ್ತಿದೆ ಎಂದು ಹೇಳಿದ್ದನು. 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತುಬಂಧ ಎಂಬ ತರಗತಿಗಳನ್ನು ಪ್ರಾರಂಭ ಮಾಡಿದ್ದು, ಹಿಂದಿನ ತರಗತಿಯಲ್ಲಿ ವ್ಯಾಸಂಗ ಮಾಡಿದ್ದನ್ನು ಹಾಗೂ ಮುಂದಿನ ತರಗತಿಯಲ್ಲಿ ಏನು ವ್ಯಾಸಂಗ ಮಾಡಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಶಿಕ್ಷಣ ಇಲಾಖೆ ಮಾಡಿರುವ ಈ ಕಾರ್ಯಕ್ರಮ ನನ್ನಂತಹ ಹಲವಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿಲ್ಲ. ಇಲ್ಲಿ ನೆಟ್ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಸ್ಮಾರ್ಟ್ ಫೋನ್ ಸಮಸ್ಯೆ ಇದೆ ಎಂದು ಹೇಳಿದ್ದ. ಆ ಆಡಿಯೋವನ್ನು ಕೇಳಿಸಿಕೊಂಡ ನಂತರ ವಿದ್ಯಾರ್ಥಿಯನ್ನು ಭೇಟಿಯಾಗಬೇಕು ಎಂದು ನೇರವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ಈಗಾಗಲೇ ಆದರ್ಶ್ ಶಿಕ್ಷಕರ ಜೊತೆಗೆ ಚರ್ಚೆ ಮಾಡಿದ್ದೇನೆ. ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೆಲ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಬಳಿಗೆ ನಾನು ಖುದ್ದಾಗಿ ಬಂದು ಚರ್ಚೆ ಮಾಡಿ ಅವರ ಸಮಸ್ಯೆಯನ್ನು ಪರಿಹಾರ ಮಾಡುವ ಉದ್ದೇಶದಿಂದ ಇಲ್ಲಿಗೆ ಭೇಟಿ ನೀಡಿದ್ದೇನೆ. ನಾನು ಚರ್ಚೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಯುವ ಹಂಬಲವಿದೆ. ಈ ಸಮಸ್ಯೆಗಳು ಇಂದು ಹುಟ್ಟಿರುವುದಲ್ಲ, ಕೆಲ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಇಲ್ಲಿಗೆ ನಾನು ಬಂದಿದ್ದು, ಮಲೆನಾಡು ಭಾಗದಲ್ಲಿ ಇಲ್ಲಿನ ಸಮಸ್ಯೆಗಳ ಪರಿಹಾರದ ಸ್ವರೂಪ ತಿಳಿದರೆ, ಶಿವಮೊಗ್ಗ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಸಹಾಯಕ ಆಗಲಿದೆ ಎಂದು ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ಅನೇಕ ಅಡೆತಡೆಯ ಮಧ್ಯೆಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶೇ. 98 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈಗಾಗಲೇ ಮೌಲ್ಯಮಾಪನ ಮುಗಿದಿದೆ. ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ 7 ಅಥವಾ 9 ಕ್ಕೆ ಪ್ರಕಟ ಮಾಡುವ ನಿರೀಕ್ಷೆಯಲ್ಲಿದ್ದೇವೆ. ಯಾವ ವಿದ್ಯಾರ್ಥಿಗಳು ಕೂಡ ಕಲಿಕೆಯಿಂದ ವಂಚಿತರಾಗಬಾರದು. ಈ ಬಾರಿ ಕೊರೊನಾ ವೈರಸ್ನಿಂದ ಕಷ್ಟಕ್ಕೆ ಈಡಾಗಿರುವುದು ಶಿಕ್ಷಣ ಇಲಾಖೆ. ನಮ್ಮ ವಿದ್ಯಾರ್ಥಿಗಳಿಗೆ ಕಲಿಕೆ ಹಾಗೂ ಶಿಕ್ಷಣ ಮುಂದುವರಿಸಲು ವಿದ್ಯಾಘಮ ಎಂಬ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಹಿಂದೆ ಎಂ.ಕೆ.ಶ್ರೀಧರ್ ನೇತೃತ್ವದಲ್ಲಿ ಒಂದು ತಜ್ಞರ ಸಮಿತಿಯನ್ನು ಮಾಡಿದ್ದೆವು. ಅವರ ವರದಿಯ ಆಧಾರದ ಮೇಲೆ ನಮ್ಮ ಮಕ್ಕಳಿಗೆ ಕೊರೊನಾ ವೈರಸ್ ಕಾಲದಲ್ಲೂ ಕಲಿಕೆಯನ್ನು ಹೇಗೆ ಮುಂದುವರಿಸಬೇಕು ಎಂದು ಯೋಚನೆ ಮಾಡಿ, ವಿದ್ಯಾಗಮ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಪ್ರತಿ 20 -25 ವಿದ್ಯಾರ್ಥಿಗಳಿಗೆ ಓರ್ವ ಉಸ್ತುವಾರಿ ಶಿಕ್ಷಕನನ್ನು ನೇಮಕ ಮಾಡುವ ಯೋಜನೆ ಇದೆ. ಈ ಪ್ರಯೋಗ ನಮಗೆ ಎಸ್ಎಸ್ಎಲ್ಸಿ ಪರೀಕ್ಷೆಯ ವೇಳೆಯಲ್ಲಿ ಉಪಯೋಗಕ್ಕೆ ಬಂದಿತ್ತು. ಈಗ ಎಲ್ಲ ಮಕ್ಕಳಿಗೂ ಇದೇ ರೀತಿಯ ಉಸ್ತುವಾರಿ ಶಿಕ್ಷಕನನ್ನು ನೇಮಿಸಿದರೆ ಅನುಕೂಲವಾಗಲಿದೆ. ಇದರಿಂದ ಅವರ ಕಲಿಕೆ ಹಾಗೂ ಅವರ ಸಮಸ್ಯೆಗಳನ್ನು ಪರಿಹಾರ ಮಾಡಲು ಹಾಗೂ ಸಮಗ್ರ ಕಾರ್ಯಕ್ರಮ ರೂಪಿಸಲು ಅನುಕೂಲವಾಗಲಿದೆ. ಅದನ್ನು ಈ ವಾರ ನಾವು ಅಂತಿಮ ಗೊಳಿಸುತ್ತೇವೆ. ಈ ಭಾಗದ ಸಮಸ್ಯೆಗಳ ಬಗ್ಗೆಯೂ ಅಧಿಕಾರಿಗಳ ಜೊತೆ ಚರ್ಚಿಸಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಎಷ್ಟೇ ಕಷ್ಟವಿದ್ದರೂ ಇಲ್ಲಿನ ಮಕ್ಕಳಿಗೆ ಓದುವ ಹಂಬಲ ಹಾಗೂ ತುಡಿತವಿದೆ. ಅದಕ್ಕೆ ತಕ್ಕಂತೆ ಶಿಕ್ಷಣ ಇಲಾಖೆಯು ಕೆಲಸ ಮಾಡಬೇಕಿದೆ ಎಂದು ಭರವಸೆ ನೀಡಿದರು.