ಚಿಕ್ಕಮಗಳೂರು :ಬೆಂಗಳೂರಿನಲ್ಲಿ ಆಕ್ಸಿಜನ್ ಇಲ್ಲದೇ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿಯಲ್ಲಿ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೊರೊನಾ ಕುರಿತಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ.. ಒಂದೆರಡು ಪ್ರಕರಣಗಳು ಆಗಿರಬಹುದು, ನಾನು ಇಲ್ಲ ಅಂತ ಹೇಳಲ್ಲ. ಇದೇ ರೀತಿ ಕೊರೊನಾ ಪ್ರಕರಣ ಹೆಚ್ಚಾದರೆ ಆಕ್ಸಿಜನ್ ಬಹಳಷ್ಟು ಬೇಕಾಗುತ್ತೆ. ಸದ್ಯ ಎಸ್ಟಿಮೇಟ್ ಮಾಡಿರೋದು 1200-1500 ಮೆಟ್ರಿಕ್ ಟನ್. ಕೇಂದ್ರ ಸರ್ಕಾರ ಸದ್ಯದ ಪರಿಸ್ಥಿತಿಗೆ 300 ಮೆಟ್ರಿಕ್ ಟನ್ ಅಲಾಟ್ ಮಾಡಿದೆ. ರಾಜ್ಯದಲ್ಲಿ ಸಾವಿರಾರು ನರ್ಸಿಂಗ್ ಹೋಮ್ಗಳಿವೆ.
ಸಣ್ಣ ನರ್ಸಿಂಗ್ ಹೋಮ್ನಲ್ಲಿ ಸಣ್ಣ ಸಿಲಿಂಡರ್ ಇಟ್ಕೊಂಡು ಟ್ರೀಟ್ಮೆಂಟ್ ಮಾಡೋರು ಇದ್ದಾರೆ. ಸಣ್ಣ ಸಿಲಿಂಡರ್ ಇದ್ರೆ ಮೂರು ಬಾರಿ ಚೇಂಜ್ ಮಾಡ್ಬೇಕಾಗುತ್ತೆ. ಈ ರೀತಿಯ ನ್ಯೂನತೆಗಳಿವೆ, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುತ್ತೇವೆ.
ಲಿಕ್ವಿಡ್ ಪ್ಲಾಂಟ್ಸ್ ಇರುವಂತಹ ಆಸ್ಪತ್ರೆಗಳು ಆಗಬೇಕು. ನಮ್ಮ ಸರ್ಕಾರ ಎಲ್ಲವನ್ನು ಬಗೆಹರಿಸುವ ವಿಶ್ವಾಸವಿದೆ. ನಾನು ವೈದ್ಯನಾಗಿದ್ರೂ ಕೂಡ ವೈಜ್ಞಾನಿಕ ಶಕ್ತಿಗಿಂತ ದೈವಶಕ್ತಿ ದೊಡ್ಡದು ಎಂದ್ರು. ಶಾರದಾ ಪೀಠದಲ್ಲಿ ವರ್ಧಂತಿ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆ, ಇಂದು ಯಾಗದ ಪೂರ್ಣಾಹುತಿ ಕಾರ್ಯಕ್ರಮ ನಡೆಯುತ್ತಿದೆ.
ಅತಿರುದ್ರ ಮಹಾಯಾಗದ ಪುರ್ಣಾಹುತಿಯಲ್ಲಿ ಸಚಿವ ಡಾ.ಸುಧಾಕರ್ ಭಾಗಿಯಾಗಿದ್ದಾರೆ. ಶಾರದಾಂಬೆ ಪೀಠದ ಮೇಲೆ ನನಗೆ ನಂಬಿಕೆಯಿದೆ. ದೇಶಕ್ಕೆ ಕೊರೊನಾದಿಂದ ಮುಕ್ತಿ ಸಿಗಲಿ ಅಂತ ಬೇಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮಠದಲ್ಲಿ ನಡೆದ ಯಾಗ ಲೋಕ ಕಲ್ಯಾಣಕ್ಕಾಗಿ, ಈ ಕಾರ್ಯಕ್ರಮಕ್ಕೆ ಸಿಎಂ ಕೂಡ ಬರಬೇಕಾಗಿತ್ತು.
ನಿಯಮಗಳನ್ನು ಪಾಲನೆ ಮಾಡಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು. ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಅವರು ಆಗಮಿಸಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಸೇರಿ ಬಿಜೆಪಿ ಮುಖಂಡರು ಅವರಿಗೆ ಸಾಥ್ ನೀಡಿದ್ದಾರೆ.
ಸಚಿವ ಸುಧಾಕರ್ ಶೃಂಗೇರಿಗೆ ಭೇಟಿ..