ಚಿಕ್ಕಮಗಳೂರು:ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಎಪಿಎಂಸಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಆಗಮಿಸುತ್ತಿದ್ದಂತೆಯೇ, ಮಾರುಕಟ್ಟೆ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು, ಮಾರುಕಟ್ಟೆಯಲ್ಲಿದ್ದ ಜನರು, ಅವರನ್ನು ಬರಮಾಡಿಕೊಂಡು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದರು. ಅವರ ಜೊತೆಯಲ್ಲಿ ಇದ್ದ ಸಚಿವ ಸಿ ಟಿ ರವಿ ಅವರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಮನವಿ ಮಾಡಿದರೂ, ಯಾರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಎಪಿಎಂಸಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನಂತರ ಸಂಪೂರ್ಣ ಮಾರುಕಟ್ಟೆ ವೀಕ್ಷಣೆ ಮಾಡಿದ ಸಚಿವರಿಬ್ಬರು ರೈತರ ಜೊತೆ ವ್ಯಾಪಾರಿಗಳ ಜೊತೆ ಮತ್ತು ಅಭಿವೃದ್ಧಿಯ ಕುರಿತು ಚರ್ಚೆ ನಡೆಸಿದರು. ಮಾರುಕಟ್ಟೆಯಲ್ಲಿನ ತರಕಾರಿಗಳ ಬಗ್ಗೆ ಹಾಗೂ ಅದಕ್ಕೆ ನಿಗದಿಯಾಗಿರುವ ಬೆಲೆಯ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ, ಕೋಲ್ಡ್ ಸ್ಟೋರೇಜ್ ಬೇಕೆಂಬ ಮನವಿ ಮಾಡಿದ್ದಾರೆ. ಅದನ್ನು ಕೂಡಲೇ ಮಂಜೂರು ಮಾಡಲಾಗುವುದು. ಎಪಿಎಂಸಿಗೆ ಬೇಕಾಗಿರುವ ಅನುಕೂಲವನ್ನು ಸಹ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ರು.
ಏನಾದರೂ ಅಭಿವೃದ್ಧಿ ಕೆಲಸ ಆಗಬೇಕು ಅಂದ್ರೆ ಅದನ್ನು ಮಾಡಿಕೊಡಲು ಸಿದ್ಧನಿದ್ದೇನೆ. ರೈತರು ಬೆಳೆದಿರುವ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಟೊಮೆಟೊ ಪ್ರತಿ ಕೆಜಿಗೆ 16.ರೂ ಸಿಗುತ್ತಿದೆ. ಕೇಂದ್ರ ತರುತ್ತಿರುವ ಎಪಿಎಂಸಿ ಕಾಯ್ದೆಯಿಂದ, ರೈತರಿಗೆ ತುಂಬಾ ಅನುಕೂಲವಾಗಲಿದ್ದು, ರೈತರು ತಾವು ಬೆಳೆದ ಬೆಳೆಯನ್ನು, ಇಲ್ಲಿಯಾದರೂ ಮಾರಾಟ ಮಾಡಬಹುದು, ಅಥವಾ ಹೊರಗಡೆಯಾದರೂ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಸಚಿವರು ತಿಳಿಸಿದರು.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ತರಕಾರಿಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿರುವ 21 ಡಿಸಿಸಿ ಬ್ಯಾಂಕ್ಗಳಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಆಗಿರುವ ಅವ್ಯವಹಾರಗಳ ಕುರಿತು ತನಿಖೆ ಮಾಡಿಸಲಾಗುತ್ತಿದೆ. ಬ್ಯಾಂಕಿಗೆ ಡೆಪ್ಯೂಟಿ ರಿಜಿಸ್ಟ್ರಾರ್ ಆಡಿಟ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಬ್ಯಾಂಕ್ ನಲ್ಲಿ ಒಂದು ತಂಡ ರಚನೆ ಮಾಡಿ, ಈ ಎಲ್ಲದರ ಕುರಿತು ತನಿಖೆಯನ್ನು ಮಾಡಿಸಲಾಗುತ್ತದೆ. ನಾನು ಕೂಡ ಖುದ್ದಾಗಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.