ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮಹಾ ಮಳೆಯಿಂದ ಉಂಟಾದ ಭೂ ಕುಸಿತ ಮತ್ತು ಮನೆ ಕುಸಿತದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮೂಡಿಗೆರೆ-ಸಬ್ಲಿಯಲ್ಲಿ ನೆರೆಯಿಂದ ಉಂಟಾದ ಹಾನಿ ವೀಕ್ಷಿಸಿದ ಅವರು ಬಳಿಕ ಬಾಳೂರು ಹೊರಟ್ಟಿ, ಮಧುಗುಂಡಿ, ಚೆನ್ನಹಡ್ಲು ಹಾಗೂ ಮಲೆಮಲೆ ಗ್ರಾಮಗಳಿಗೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಅಲ್ಲಿನ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದಾರೆ.
ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಅಶೋಕ್ ಜಿಲ್ಲಾಧಿಕಾರಿಗಳ ಪರಿಹಾರ ನಿಧಿ ಖಾತೆಯಲ್ಲಿ ಅನುದಾನವಿದ್ದು, ಹಾನಿಗೊಳಗಾಗಿರುವ ಪ್ರದೇಶಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುವುದು. ಕೇಂದ್ರ ಸರ್ಕಾರದ ಬೆಳೆ ಹಾನಿ ಪರಿಹಾರ ನಾಲ್ಕೈದು ದಿನಗಳಲ್ಲಿ ಬರಲಿದೆ ಎಂದು ಭರವಸೆ ನೀಡಿದರು.
ಪ್ರವಾಹದಿಂದ ಶೇ.80ರಷ್ಟು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶೀಘ್ರ ₹1 ಲಕ್ಷ ಪರಿಹಾರ ನೀಡಲಾಗುವುದು. ಈ ಹಣವನ್ನು ಸಂತ್ರಸ್ತರಿಗೆ ನೇರವಾಗಿ ನೀಡುವುದರಿಂದ ತಮ್ಮ ಮನೆಗಳ ದುರಸ್ತಿ ಕಾರ್ಯಗಳನ್ನು ಸುಲಭವಾಗಿ ಕೈಗೊಳ್ಳಬಹುದು. ಸಂತ್ರಸ್ತರ ಮಕ್ಕಳಿಗೆ ಅವಶ್ಯವಿರುವ ಶಿಕ್ಷಣವನ್ನು ಒದಗಿಸಬೇಕು ಹಾಗೂ ಆ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಅನುತ್ತೀರ್ಣ ಮಾಡಬಾರದು ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ನೊಂದ ಸಂತ್ರಸ್ತರಿಗೆ ನೂರು ದಿನಗಳ ನರೇಗಾದ ವತಿಯಿಂದ ಕೆಲಸ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.