ಚಿಕ್ಕಮಗಳೂರು:ಜಿಲ್ಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ನಿರ್ಮಾಣ ಕುರಿತಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜು ಆರಂಭ...ಸಚಿವ ಸಿ.ಟಿ. ರವಿ - ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ
ಹೊಸದಾಗಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜು ಮುಂದಿನ ವರ್ಷದಿಂದ ಕಾರ್ಯಾರಂಭಿಸಲಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ.
ನಗರದ ಹೊರವಲಯದ ತೇಗೂರು ಗ್ರಾಮದ ಸಮೀಪ 35.2 ಎಕರೆ ಜಮೀನು ಮಂಜೂರಾಗಿದ್ದು, 438 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಅತ್ಯಾಧುನಿಕ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ಈಗಾಗಲೇ ಅನುಮೋದನೆ ದೊರೆತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ತರಗತಿಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು. ಸೆಪ್ಟೆಂಬರ್ ಒಳಗಾಗಿ, ಭಾರತೀಯ ವೈದ್ಯಕೀಯ ಮಂಡಳಿಯ ಮಾನ ದಂಡಗಳ ಅನ್ವಯ, ವೈದ್ಯಕೀಯ ತರಗತಿಗಳನ್ನು ಪ್ರಾರಂಭಿಸಲು, ನಗರದಲ್ಲಿ ತಾತ್ಕಾಲಿಕವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಟ್ಟಡವನ್ನು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಖಾಸಗಿ ವಸತಿ ಗೃಹಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಜಿಲ್ಲಾಸ್ಪತ್ರೆಯನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವರ್ಗಾಯಿಸುವ ಕುರಿತು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಇದರ ಜೊತೆಗೆ ಗ್ರಾಮೀಣ ಹಾಗೂ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವರ್ಗಾವಣೆ ನಡೆಯಲಿದ್ದು, ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 174 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದರೊಂದಿಗೆ, ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಸ್ಥಾಪಿಸಲಾಗುವುದು. ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು. ಸಂಸದೆ ಶೋಬಾ ಕರಂದ್ಲಾಜೆ ಹಾಗೂ ಇನ್ನಿತರರು ಸಭೆಯಲ್ಲಿ ಹಾಜರಿದ್ದರು.