ಚಿಕ್ಕಮಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ (ಚಿಕ್ಕ ಮಾಗರವಳ್ಳಿ ತಿಮ್ಮೇಗೌಡ ರವಿ) ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಸಿಟಿ ರವಿ ರಾಜಕೀಯ ಜೀವನದ ಹಿನ್ನೆಲೆ:
ಎಂ.ಎ ಪದವೀಧರರಾಗಿರುವ ಸಿ.ಟಿ ರವಿ, ಒಟ್ಟು ನಾಲ್ಕು ಭಾರೀ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದು, ಒಂದು ಭಾರೀ ಚುನಾವಣೆಯಲ್ಲಿ ಸೋಲುಂಡಿದ್ದರು. ಒಂದು ಭಾರೀ ಸಚಿವ ಸ್ಥಾನ ಅಲಂಕರಿಸಿದ್ದರು. ಜಗದೀಶ್ ಶೆಟ್ಟರ್ ಸಿಎಂ ಆದ ವೇಳೆಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು.
ರಾಜಕೀಯ ಜೀವನದ ಮೊದಲ ಹಂತದಲ್ಲೇ ಜಿ.ಪಂ ಚುನಾಚವಣೆಯಲ್ಲಿ ಸೋಲು ಕಂಡಿದ್ದ ಸಿ.ಟಿ ರವಿ, ನಂತರ ನಡೆದ 1998ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಸೋಲುಂಡಿದ್ದರು. ಬಳಿಕ 2004, 2008, 2013, 2018ರಲ್ಲಿ ಒಟ್ಟು ನಾಲ್ಕು ಭಾರೀ ಸತತ ಗೆಲುವು ಸಾಧಿಸಿದ್ದಾರೆ.
ಹೋರಾಟದ ಮೂಲಕ ರಾಜ್ಯ ನಾಯಕನಾದರು:
ಚಿಕ್ಕಮಗಳೂರು ಜಿಲ್ಲೆ ವಿವಾದಿತ ದತ್ತಪೀಠದ ಹೋರಾಟ ಮೂಲಕ ರಾಜ್ಯ ನಾಯಕನಾಗಿ ಹೊರಹೊಮ್ಮಿ, ಹಿಂದೂ ತತ್ತ್ವದ ವಿಚಾರಧಾರೆ ಮೂಲಕ ಮುಖ್ಯವಾಹಿನಿಗೆ ಬಂದವರು. ಸಂಘಪರಿವಾರದ ಹಿನ್ನೆಲೆಯಿಂದ ಬಂದ ಸಿ.ಟಿ ರವಿ, ಬಿಜೆಪಿಯಲ್ಲಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡು, ರಾಜ್ಯ ವಕ್ತಾರ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಸಂಸದೀಯ ಮಂಡಳಿಗೆ ವಿಶೇಷ ಆಹ್ವಾನಿತ ಸದಸ್ಯ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಕುಟುಂಬದ ಹಿನ್ನೆಲೆ :
ಸಚಿವ ಸಿ.ಟಿ ರವಿ ಕುಟುಂಬ ಕೃಷಿ ಹಿನ್ನಲೆ ಹೊಂದಿದ್ದು ಕಾಫಿ ಬೆಳೆಗಾರರಾಗಿದ್ದಾರೆ. ಕುಟುಂಬದದಲ್ಲಿ ಸಿ.ಟಿ ರವಿ ಹೊರತುಪಡಿಸಿ ಯಾರೂ ರಾಜಕೀಯ ಹಿನ್ನೆಲೆ ಹೊಂದಿದವರಿಲ್ಲ.
ಸಚಿವ ಸ್ಥಾನ ದೊರೆತಿದ್ದು ಹೇಗೆ?
ರಾಜ್ಯ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರೂ ಸಿ.ಟಿ ರವಿ ಹಾಗೂ ಮುಖ್ಯಮಂತ್ರಿ ಯಡಿಯ್ಯೂರಪ್ಪ ನಡುವೆ ಹೇಳಿಕೊಳ್ಳುವಂತಹ ಬಾಂಧವ್ಯ ಏನು ಇಲ್ಲ. ಬಿಜೆಪಿ ಮುಖಂಡ ಸಂತೋಷ್ ಜೀ ಕಡೆಯಿಂದ ಸಚಿವ ಸ್ಥಾನ ದೊರಕಿದೆ ಎನ್ನುವ ಮಾಹಿತಿ ನೀಡಿದ್ದಾರೆ.