ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕಿನಿಂದ 6 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಐವರು ಚಿಕ್ಕಮಗಳೂರು ನಗರದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಐವರಲ್ಲಿ 2-3 ಸೋಂಕಿತರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ನಗರದ ಹೊರವಲಯದ ನರಗನ ಹಳ್ಳಿಯ ಸಿಡಿಎ ಲೇಜೌಟ್ ಹಿಂಭಾಗದಲ್ಲಿ ನೆರವೇರಿಸಿದೆ.
ಏಕೀ ನಿರ್ಲಕ್ಷ್ಯ?: ಸೋಂಕಿತನ ಶವಸಂಸ್ಕಾರದ ಬಳಿಕ ಪಿಪಿಇ ಕಿಟ್, ಗ್ಲೌಸ್ ಬೀದಿಗೆಸೆದ ಸಿಬ್ಬಂದಿ
ಕೊರೊನಾ ಸೋಂಕಿತರ ಶವಸಂಸ್ಕಾರ ನೆರವೇರಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ರಕ್ಷಣಾ ಪರಿಕರಗಳನ್ನು ದಾರಿ ಮಧ್ಯದಲ್ಲಿಯೇ ಎಸೆದಿರುವುದು ಪತ್ತೆಯಾಗಿದೆ.
ಅಂತ್ಯಸಂಸ್ಕಾರ ಮಾಡಿದ ನಂತರ ಸಿಬ್ಬಂದಿ ಧರಿಸಿದ್ದ ಪಿಪಿಇ ಕಿಟ್ ಹಾಗೂ ಗ್ಲೌಸ್ಗಳನ್ನು ದಾರಿಯಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಈ ವಸ್ತುಗಳನ್ನು ನೋಡಿದ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಈ ದಾರಿಯಲ್ಲಿ ಕಾಫಿ ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರು ಈ ರಸ್ತೆಯಲ್ಲಿ ಸಂಚಾರ ಮಾಡೋದಕ್ಕೂ ಭಯ ಪಡುವಂತಾಗಿದೆ.
ಕೆಲ ಬೀದಿ ನಾಯಿಗಳು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಈ ವಸ್ತುಗಳನ್ನು ಎಳೆದುಕೊಂಡು ಹೋಗುತ್ತಿವೆ. ಸಿಬ್ಬಂದಿಯ ಈ ನಿರ್ಲಕ್ಷ್ಯಕ್ಕೆ ಇಲ್ಲಿನ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ವಸ್ತುಗಳಿಂದ ಕೊರೊನಾ ಬರಬಹುದಾ? ಎಂಬ ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಅನ್ನೋದು ಸ್ಥಳೀಯರ ಆಗ್ರಹ.