ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಶ್ರೀ ಹೊರನಾಡು ಅನ್ನಪೂರ್ಣೆಶ್ವರಿ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಬಡವರ ಅನುಕೂಲಕ್ಕಾಗಿ ಉಚಿತ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರ ಅಂಗವಾಗಿ ಕ್ಷೇತ್ರದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಅವರ ನೇತೃತ್ವದಲ್ಲಿ ಸರಳ ಸಾಮೂಹಿಕ ವಿವಾಹ ನಡೆಸಲಾಯಿತು.
ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಸಾಮೂಹಿಕ ವಿವಾಹ ಇಲ್ಲಿಯವರೆಗೂ ಒಂದು ಸಾವಿರಕ್ಕೂ ಅಧಿಕ ಉಚಿತ ಸಾಮೂಹಿಕ ವಿವಾಹಗಳು ನಡೆದಿರೋದು ಈ ಕ್ಷೇತ್ರದ ಮತ್ತೊಂದು ವಿಶೇಷವಾಗಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಸುಮಾರು 30 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.
ಈ ಕಾರ್ಯಕ್ರಮದ ನಡುವೆಯೇ ಬಡವರಿಗೆ ಅನೂಕೂಲವಾಗಲೆಂದು ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ ನೂರು ಮನೆಗಳಿಗೆ ಉಚಿತ ಹೆಂಚು ವಿತರಣೆ, ಐವತ್ತು ಮನೆಗಳಿಗೆ ಉಚಿತ ವಿದ್ಯುತ್, ನೂರು ಜನ ರೈತರಿಗೆ ಕೃಷಿ ಉಪಕರಣಗಳ ವಿತರಣೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಎರಡು ಸಾವಿರ ತಟ್ಟೆಗಳನ್ನು ವಿತರಣೆ ಮಾಡಲಾಯಿತು.
ಹೊರನಾಡು ಕ್ಷೇತ್ರದ ಧರ್ಮಕರ್ತರ ಪೂರ್ವಿಕರ ಕಾಲದಿಂದಲೂ ಈ ರೀತಿಯ ಕೆಲಸ ಮಾಡುತ್ತಿದ್ದು, ದೇವಸ್ಥಾನಕ್ಕೆ ಬರುವ ಸಂಪನ್ಮೂಲಗಳು ಬಡವರಿಗೆ ಉಪಯೋಗ ಆಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಗಳನ್ನ ಮುಂದುವರೆಸಿಕೊಂಡು ಬಂದಿದ್ದಾರೆ.