ಚಿಕ್ಕಮಗಳೂರು: ತಂದೆಯ ಮೇಲಿನ ದ್ವೇಷಕ್ಕೆ ಕಾಮುಕನೋರ್ವ ಬಾಲಕಿಯನ್ನು ಪುಸಲಾಯಿಸಿ ಶಾಲೆಯಿಂದ ಹೋಮ್ ಸ್ಟೇಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದೆ.
ಮಹೇಶ್ ಅತ್ಯಾಚಾರ ಎಸಗಿದ ಆರೋಪಿ. ಈತ ಮನೆಯೊಂದರಲ್ಲಿ ಹಿಟಾಚಿ ಚಾಲಕನ ವೃತ್ತಿಗೆ ಸೇರಿದ್ದನಂತೆ. ಆದರೆ ಈತನ ನಡತೆ ಗಮನಿಸಿದ ಮಾಲೀಕ ಬುದ್ದಿ ಹೇಳಿದ್ದ. ಆದರೆ ಮಾಲೀಕನ ಮಗಳ ಮೇಲೆ ಮೋಹವಿಟ್ಟಿದ್ದ ಮಹೇಶ್, ಆಕೆಯನ್ನು ಪುಸಲಾಯಿಸಿ ಶಾಲೆಯಿಂದ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗ್ತಿದೆ.
ಆರೋಪಿ ಮಹೇಶ್, 'ನಿನ್ನ ತಂದೆಗೆ ಹುಷಾರಿಲ್ಲ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ' ಎಂದು 8ನೇ ತರಗತಿ ಬಾಲಕಿಯನ್ನು ಸುಮಾರು 4 ಕಿ.ಮೀ. ದೂರ ಕರೆದುಕೊಂಡು ಹೋಗಿದ್ದಾನೆ. ಬೈಕ್ ಊರಿನ ದಾರಿ ಹಿಡಿಯದ ಕಾರಣ ಬಾಲಕಿ ಕೇಳಿದಾಗ ಒಂದೊಂದು ಊರಿನ ಹೆಸರನ್ನು ಹೇಳಿ 40 ಕಿ.ಮೀ. ದೂರದ ಹೋಮ್ ಸ್ಟೇ ಗೆ ಕರೆದೊಯ್ದಿದ್ದಾನೆ.