ಚಿಕ್ಕಮಗಳೂರು: ಮಾನವರ ವಿವಿಧ ಚಟುವಟಿಕೆಗಳಿಂದ ಉರಗಗಳ ಆವಾಸ ಸ್ಥಾನಕ್ಕೆ ಕುತ್ತು ಉಂಟಾಗುತ್ತಿದೆ. ಮನುಷ್ಯನು ಹಾವುಗಳು ವಾಸಿಸುವ ಸ್ಥಳಕ್ಕೆ ಲಗ್ಗೆ ಹಾಕಿ ಅದರ ಆವಾಸ ಸ್ಥಳಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾನೆ. ಇದರಿಂದ ಹಾವುಗಳಿಗೆ ನೆಲೆಸಲು ಬೇರೆ ಸ್ಥಳವಿಲ್ಲದೆ ಮನುಷ್ಯನು ವಾಸ ಮಾಡುವ ಸ್ಥಳಗಳ ಕಡೆ ಮುಖ ಮಾಡುತ್ತಿವೆ.
ಹಾವುಗಳ ಆವಾಸ ಸ್ಥಾನವನ್ನು ಮನುಷ್ಯರು ಆಕ್ರಮಿಸಿಕೊಳ್ಳುತ್ತಿರುವ ಕಾರಣ, ಅವುಗಳಿಗೆ ವಾಸಿಸಲು ಸೂಕ್ತ ಸ್ಥಳ ಸಿಗದೇ ಮನೆಗಳಿಗೆ ನುಗ್ಗುತ್ತಿರುವುದನ್ನು ನಾವು ಕಾಣುತ್ತಿರುತ್ತೇವೆ. ಈ ರೀತಿಯ ಘಟನೆಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.
ಜಿಲ್ಲೆಯ ಎಲ್ಲಾ ಭಾಗದಲ್ಲೂ ಹಾವುಗಳು ವಾಸಿಸುವ ಪ್ರದೇಶಗಳಿದ್ದು, ಸಾಮಾನ್ಯವಾಗಿ ಹಾವುಗಳು ತೋಟ, ಗದ್ದೆ, ಹೊಲ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದರೆ ಈ ಎಲ್ಲ ಜಾಗಗಳನ್ನು ಮಾನವ ಆಕ್ರಮಿಸಿಕೊಳ್ಳುತ್ತಿದ್ದಾನೆ.
ಹಾವುಗಳ ಆವಾಸ ಸ್ಥಾನ ಆಕ್ರಮಿಸುತ್ತಿರುವ ಮನುಜ ಕಳೆದ ಎರಡು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಮನೆಗಳಿಗೆ ಹಾವು ನುಗ್ಗಿರುವ ನೂರಾರು ಪ್ರಕರಣಗಳು ಕಂಡುಬಂದಿವೆ. ಹಾವಿನ ಮೂಲಸ್ಥಾನವನ್ನು ಆಕ್ರಮಣ ಮಾಡಿರುವ ಹಿನ್ನೆಲೆ ಈ ರೀತಿಯಾಗಿ ಮನುಷ್ಯನ ಮನೆಗಳಿಗೆ ಈ ಹಾವುಗಳು ಬರುತ್ತಿವೆ. ಪ್ರಮುಖವಾಗಿ ನಾಗರಹಾವು, ಕೆರೆ ಹಾವು, ಕಟ್ಟು ಹಾವು, ಉರಿ ಮಂಡಲ, ಮಣ್ಣು ಮುಕ್ಕ, ಹೆಬ್ಬಾವು, ಕಾಳಿಂಗ ಸರ್ಪ ಈ ರೀತಿಯ ಬಗೆ ಬಗೆ ಉರಗಗಳು ಮನೆಗಳಿಗೆ ಬರುತ್ತಿದ್ದು, ಪ್ರಮುಖವಾಗಿ ನಗರ ಪ್ರದೇಶದಲ್ಲಿ ನಾಗರಹಾವು ಹಾಗೂ ಕೆರೆ ಹಾವುಗಳು ಕಾಣಿಸಿಕೊಳ್ಳುತ್ತಿವೆ.
ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪ ಹಾಗೂ ಹೆಬ್ಬಾವು ಹೆಚ್ಚಾಗಿರುತ್ತವೆ. ಜೂನ್ - ಜುಲೈ ತಿಂಗಳಿನಲ್ಲಿ ಹಾವುಗಳು ಸಾಮಾನ್ಯವಾಗಿ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಅದನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ಸುರಕ್ಷಿತ ಜಾಗ ಮನುಷ್ಯನ ಮನೆ ಎಂದು ತಿಳಿದ ಹಾವುಗಳು, ಈ ರೀತಿಯಾಗಿ ಮನೆಗಳ ಬಳಿ ಬರುತ್ತಿವೆ. ಈ ಸಮಯದಲ್ಲಿ ಮನೆಗಳ ಬಳಿ ಕಪ್ಪೆಗಳು ಹಾಗೂ ಇತರೆ ಜೀವಿಗಳು ಹಾವಿನ ಪ್ರಮುಖ ಆಹಾರವಾಗಿ ಆಕರ್ಷಣೆಯಾಗುತ್ತವೆ.
ಈ ರೀತಿಯಾಗಿ ಹಾವುಗಳು ಮನೆಯ ಬಳಿ ಕಾಣಿಸಿಕೊಳ್ಳುವುದರಿಂದ ಕೆಲವರು ಅವನ್ನು ಸಾಯಿಸಲು ಮುಂದಾದರೆ, ಇನ್ನು ಕೆಲವರು ರಕ್ಷಿಸಿ ಕಾಡಿಗೆ ಬಿಡುತ್ತಾರೆ.