ಚಿಕ್ಕಮಗಳೂರು:ನೀರಿಗಾಗಿ ಹೋರಾಟ ನಡೆಸಿ ಏತ ನೀರಾವರಿ ಯೋಜನೆಯನ್ನ ಜಾರಿಗೆ ತಂದರು. ಯೋಜನೆ ಶುರುವಾಗಿ 3 ದಶಕಗಳು ಕಳೆದರೂ ನೀರು ನೀಡೋಕೆ ಸರ್ಕಾರ ಮುಂದಾಗುತ್ತಿಲ್ಲ. ನೀರು ಬರೋ ಖುಷಿಯಲ್ಲಿ ಜಮೀನು ನೀಡಿದವರಿಗೆ ಪರಿಹಾರವೂ ಸಿಕ್ಕಿಲ್ಲ. ನೀರೂ ಇಲ್ಲ, ಭೂಮಿಯು ಇಲ್ಲ ಎನ್ನು ಸ್ಥಿತಿ ರೈತರದ್ದಾಗಿದೆ.
ಜಿಲ್ಲೆಯ ಮಳಲೂರು ಗ್ರಾಮದ ಸುತ್ತಮುತ್ತಲ ಗ್ರಾಮಗಳ ಜನರ ಜಮೀನುಗಳಿಗೆ ನೀರು ಒದಗಿಸುವ ಸದುದ್ದೇಶದಿಂದ 1998ರಲ್ಲಿ ಸರ್ಕಾರ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದಿತು. ಈಗ 18 ವರ್ಷಗಳೇ ಗತಿಸಿದ್ದು ಯೋಜನೆ ನನೆಗುದಿಗೆ ಬಿದ್ದಿದೆ. ನೀರು ಹರಿಸಿ ಸುತ್ತಲ ರೈತರ ಬದುಕನ್ನು ಹಸನ ಮಾಡುವ ಕನಸು ನನಸಾಗಿಯೇ ಉಳಿದಿದೆ.
ನನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆ 1998ರಲ್ಲಿ ಆರಂಭವಾದ ಈ ಯೋಜನೆಯನ್ನು ಸುಮಾರು 1200 ಎಕರೆ ಪ್ರದೇಶಕ್ಕೆ ನೀರೊದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಜಾಕ್ವೆಲ್, ಇಂಟೆಕ್ವೆಲ್, ಪೈಪ್ಗಳ ಅಳವಡಿಕೆ ಮುಕ್ತಾಯವಾಗಿದ್ದು, 2ನೇ ಹಂತದ ಪಂಪ್ ಅಳವಡಿಕೆ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಅಲ್ಲದೆ ಯೋಜನೆಗಾಗಿ ರೈತರ ಕೃಷಿ ಜಮೀನುಗಳನ್ನು ವಶಪಡಿಸಿಕೊಂಡು ಕೆಲ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ ಎನ್ನಲಾಗಿದೆ. ಇದರ ಜೊತೆಗೆ ಇನ್ನು ಉಳಿದಿರುವ 19 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತ ಸರ್ಕಾರಕ್ಕೆ ಅನುಮತಿ ಪತ್ರ ಬರೆದಿದ್ದು, ಸರ್ಕಾರ ಮಾತ್ರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.
ಈ ಏತ ನೀರಾವರಿಗೆ ಕಳೆದ ಹಲವು ವರ್ಷದಿಂದ ಜನ ಒತ್ತಡ ಹೇರಿದರೂ, ಧರಣಿ ಮಾಡಿದರೂ ರೈತರ ಹೋರಾಟಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯ ಸುತ್ತಲು ಕೋಟಿ ರೂಪಾಯಿ ಬೆಳೆ ಬಾಳುವ ಸಲಕರಣೆಗಳನ್ನು ಹಾಕಲಾಗಿದೆ. ಹಾಕಿರುವ ಪೈಪ್ಗಳು ಹಾಳಾಗಿ ಹೋಗುತ್ತಿವೆ. ಸಾವಿರಾರು ಎಕರೆ ಪ್ರದೇಶ ಭೂಮಿಯನ್ನು ಹಸಿರಾಗಿಸುವ ಏತ ನೀರಾವರಿ ಯೋಜನೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ನನೆಗುದಿಗೆ ಬಿದ್ದಿದೆ.