ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಆನ್ಲೈನ್ ಕ್ಲಾಸ್ನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ, ಶಾಲೆಗಳನ್ನು ಆರಂಭಿಸಿ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಆನ್ಲೈನ್ ಕ್ಲಾಸ್ ನಡೆಸುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆನ್ಲೈನ್ ಕ್ಲಾಸ್ ರದ್ದುಮಾಡಿ ಶಾಲೆಗಳನ್ನು ತೆರೆಯಿರಿ ಎಂದಿದ್ದಾರೆ.
ಮೊಬೈಲ್ ಇಲ್ಲದೆ ಕೂಲಿ ಕಾರ್ಮಿಕರ, ಬಡವರ್ಗದ ಶೇ 50ರಷ್ಟು ಮಕ್ಕಳು ಬೌದ್ಧಿಕವಾಗಿ ದಿವಾಳಿಯಾಗುತ್ತಿದ್ದಾರೆ. ಅವರಿಗೆ ಆಟ-ಪಾಠ ಇಲ್ಲವಾಗಿದೆ. ಬೇರೆ ದಾರಿ ಏನು ಎಂಬುದೇ ಪೋಷಕರಿಗೆ ತಿಳಿಯದೆ ಕಂಗಾಲಾಗಿದ್ದಾರೆ ಎಂದಿದ್ದಾರೆ. ಸ್ಥಿತಿವಂತರು ಮಾತ್ರವೇ ಮಕ್ಕಳಿಗೆ ಮೊಬೈಲ್ ತೆಗೆದುಕೊಡಬಹುದು. ಆನ್ಲೈನ್ ಕ್ಲಾಸಿಗಾಗಿ ನೆಟ್ವರ್ಕ್ ಸಿಗದೆ ಮರದ ಮೇಲೆ ಹತ್ತಿ ಕುಳಿತುಕೊಳ್ಳುವುದು, ಗುಡ್ಡಕ್ಕೆ ಹೋಗೋದು, ಮಳೆಯಲ್ಲಿ ಅಪ್ಪ ಛತ್ರಿ ಹಿಡಿಯೋದು, ಮಗ ಓದೋದು ಹೀಗೆ ನರಕಯಾತನೆ ಅನುಭವಿಸುತ್ತಿದ್ದಾರೆ. ಬಡವರ್ಗದವರಿಗೆ ಶಿಕ್ಷಣ ಎಲ್ಲಿ ದೂರವಾಗುತ್ತೋ ಎಂಬ ಆತಂಕ ಎದುರಾಗಿದೆ ಎಂದಿದ್ದಾರೆ.