ಚಿಕ್ಕಮಗಳೂರು: ಇಲ್ಲಿಯ ಹುಳಿಯಾರದ ಹಳ್ಳಿಯಲ್ಲಿ ಬಲೆಗೆ ಸಿಲುಕಿ ಒಂದೂವರೆ ವರ್ಷದ ಗಂಡು ಚಿರತೆ ಮೃತ ಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಹುಳಿಯಾರದ ಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆಯಲ್ಲಿ ಗ್ರಾಮಗಳಲ್ಲಿ ಪದೇ ಪದೆ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನು ಇರಿಸಿದ್ದರು. ಆದರೆ, ನಿನ್ನೆ ರಾತ್ರಿ ಚಿರತೆ ಉರುಳಿಗೆ ಸಿಲುಕಿ ಗಾಯಗೊಂಡು ಸಾವನ್ನಪ್ಪಿದೆ.
ಪ್ರೇಮಾ ವಿಶ್ವನಾಥ್ ಎಂಬುವವರಿಗೆ ಸೇರಿದ ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ಚಿರತೆ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಮೋಹನ್, ತಂತಿಯ ಬಲೆಗೆ ಚಿರತೆ ಸಿಕ್ಕಿ ಹಾಕಿ ಕೊಂಡಿರುವುದಾಗಿ ಬೆಳಗ್ಗೆ 5 ಗಂಟೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಭತ್ತ ಮತ್ತು ಇತರ ಬೆಳೆಗಳನ್ನು ನಾಶ ಪಡಿಸುತ್ತಿರುವ ಕಾಡು ಹಂದಿಗಳನ್ನು ಹಿಡಿಯಲು ಕೆಲ ಜನರು ಉರುಳು ಹಾಕಿರುವುದು ಪ್ರಾಥಮಿಕವಾಗಿ ಕಂಡು ಬಂದಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತೋಟದ ಮಾಲೀಕರಿಗೂ ನೋಟಿಸ್ ಜಾರಿ ಮಾಡಲಾಗಿದೆ.
ಕಾಡು ಹಂದಿಗಳನ್ನು ಕೊಲ್ಲಲು ಸರ್ಕಾರ ಅನುಮತಿ ನೀಡಿದ್ದರೂ, ರೈತರು ಅರಣ್ಯ ಇಲಾಖೆಗೆ ಮುಂಚಿತವಾಗಿ ತಿಳಿಸಬೇಕು ಮತ್ತು ಕಳೆಬರಗಳನ್ನು ಇಲಾಖೆಗೆ ಹಸ್ತಾಂತರಿಸಬೇಕು ಎಂದು ಡಿಸಿಎಫ್ ಹೇಳಿದ್ದು, ಇಲಾಖೆಗೆ ಮಾಹಿತಿ ನೀಡದೇ ಪ್ರಾಣಿಗಳನ್ನು ಕೊಲ್ಲುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಚಿರತೆ ಕಳೇಬರ ಪರೀಕ್ಷೆಯನ್ನು ಪಶು ವೈದ್ಯ ವಿಶಾಖ್ ನಡೆಸಿದ್ದು ಅರಣ್ಯ ಇಲಾಖೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಮುಂದು ವರಿಸಲಾಗುತ್ತಿದೆ.